ಸಮಿತಿ ವತಿಯಿಂದ ಆಗಸ್ಟ್ 15 ರಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಎಸ್. ಚೆನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಈ ಬಗ್ಗೆ ನಡೆದ ಪೂರ್ವ ಭಾವೀ ಸಭೆಯಲ್ಲಿ ನಿರ್ಣಯಿಸಲಾಯಿತು. ಅಂದು ಬೆಳಿಗ್ಗೆ 9.00 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ ನಂತರ ಸಶಸ್ತ್ರ ಮೀಸಲು ಪಡೆ.ಕರಾವಳಿ ರಕ್ಷಣಾ ಪಡೆ,ಸ್ಕೌಟ್ಸ್ ಗೈಡ್ಸ್ ,ರೈಲ್ವೆ ರಕ್ಷಣಾ ದಳ ಮುಂತಾದವರಿಂದ ಆಕರ್ಷಕ ಪಥ ಸಂಚಲನ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.ಪ್ಲಾಸ್ಟಿಕ್ ಧ್ವಜವನ್ನು ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿರುವ ಸರಕಾರಿ ಕಛೇರಿಗಳು, ಖಾಸಗಿ ಕಟ್ಟಡಗಳು ಆಗಸ್ಟ್ 14 ಮತ್ತು 15 ರಂದು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ವಿನಂತಿಸಿದ್ದಾರೆ. ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಕ್ರೀಡೆಗಳಲ್ಲಿ ಬಹುಮಾನ ಗಳಿಸಿದವರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕಲ್ಕೂರಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.