Thursday, July 7, 2011

ಜಿಲ್ಲೆಯ ರೈತರಿಗೆ ರಾಷ್ಟ್ರೀಯ ಕೃಷಿ ವಿಮೆ ಸೌಲಭ್ಯ

ಮಂಗಳೂರು,ಜುಲೈ.07:ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ಕೃಷಿ ವಿಮೆ ಯೋಜನೆಯನ್ನು ಪ್ರಸಕ್ತ ಸಾಲಿಗೂ ವಿಸ್ತರಿಸಲಾಗಿದೆ. ಯೋಜನಾ ವ್ಯಾಪ್ತಿಯಿಂದ ಮಂಗಳೂರು ಎ ಹೋಬಳಿಯನ್ನು ಹೊರಗಿಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆ ಯಾಶ್ರಿತ ಭತ್ತ ಬೆಳೆ ಯುವ ರೈತರು ಹೆಕ್ಟೇರ್ ಗೆ ರೂ. 332.50 ಪ್ರೀಮಿಯಂ ಪಾವತಿಸಿ ಸೌಲಭ್ಯ ವ್ಯಾಪ್ತಿಗೆ ಒಳ ಪಡ ಬಹು ದಾಗಿದೆ. ಬೆಳೆ ಸಾಲ ಪಡೆಯದ ರೈತರಿಗೆ ಚಂದಾ ದಾರರಾಗಲು ಜುಲೈ 31 ಕೊನೆಯ ದಿನಾಂಕ. ಬೆಳೆ ಸಾಲ ಪಡೆಯುವ ರೈತರು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರೊಳಗೆ ಕಡ್ಡಾಯವಾಗಿ ಪ್ರಾಯೋಗಿಕವಾಗಿ ಹವಾಮಾನ ಆಧರಿತ ಬೆಳೆ ವಿಮಾ ವ್ಯಾಪ್ತಿಗೆ ಒಳಪಡುತ್ತಾರೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಿಮಾ ಕಂತಿನಲ್ಲಿ ಶೇ. 10 ರಿಯಾಯಿತಿ ಇರುತ್ತದೆ.
ಹೋಬಳಿಯನ್ನು ಘಟಕವಾಗಿ ಪರಿಗಣಿಸಿ ಹೋಬಳಿವಾರು ಬೆಳೆ ಕಟಾವು ಪ್ರಯೋಗಗಳ ಮೂಲಕ ವಾಸ್ತವಿಕ ಇಳುವರಿ ಲೆಕ್ಕಾಚಾರ ಮಾಡಲಾಗುವುದು. ಶೇ.60ಕ್ಕಿಂತ ಕಡಿಮೆ ವಾಸ್ತವಿಕ ಇಳುವರಿ ಬಂದಲ್ಲಿ ಇಡೀ ಪ್ರದೇಶದ ರೈತರು ಇಳುವರಿ ಕಡಿತಕ್ಕೆ ಒಳಗಾಗಿರುವರೆಂದು ಭಾವಿಸಿ ಸೂಕ್ತ ಪರಿಹಾರ ನೀಡಲಾಗುವುದು.
ಪ್ರಕೃತಿ ವಿಕೋಪಗಳಾದ ಪ್ರವಾಹ, ಆಲಿಕಲ್ಲು ಮಳೆ, ಭೂಕಂಪ, ಚಂಡಮಾರುತಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕ ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು. ಈ ರೀತಿ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು 48 ಗಂಟೆಗಳೊಳಗಾಗಿ ಸಂಬಂಧಿಸಿದ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾ, ಬೆಂಗಳೂರು ಈ ಕಚೇರಿಗೆ (080 25322860) ವಿವರಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ಕೋರಿರುತ್ತಾರೆ.