Tuesday, July 12, 2011

ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಸಭೆ

ಮಂಗಳೂರು,ಜುಲೈ.12:ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹಾಗೂ ಪ್ರವಾಸಿಗರ ಹಿತವನ್ನು ಗಮನದಲ್ಲಿರಿಸಿ ತಣ್ಣೀರುಬಾವಿ ಹಾಗೂ ಸೋಮೇಶ್ವರ ಕಡಲ ತೀರದ ನಿರ್ವಹಣೆ, ಮೂಲಭೂತ ಸೌಲಭ್ಯಗಳ ವ್ಯವಸ್ಥೆ, ರಕ್ಷಣೆ ಮತ್ತು ಸುರಕ್ಷತೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಬಿಒಎಂಟಿ (ಬಿಲ್ಡ್ ಆಪರೇಟ್ ಮೈಂಟೆನನ್ಸ್ ಟ್ರಾನ್ಸ್ ಪೋರ್ಟ್) ಆಧಾರದ ಮೇಲೆ ಅಭಿವೃದ್ಧಿಗೊಳಿಸಲು ವಿಧಾನಸಭಾ ಉಪಸಭಾಪತಿ ಎನ್. ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಯಿತು.
ತಣ್ಣೀರುಬಾವಿ ಕಡಲತೀರ ಅಭಿವೃದ್ಧಿಗೆ ತಾಂತ್ರಿಕ ಬಿಡ್ನಲ್ಲಿ ಅರ್ಹವಾಗಿರುವ ಮೇ. ಯೋಜಕ ಇಂಡಿಯಾ ಪ್ರೈ ಲಿ. ಮಂಗಳೂರು ಹಾಗೂ ಸೋಮೇಶ್ವರ ಕಡಲ ತೀರ ನಿರ್ವಹಣೆಗೆ ಅರ್ಹವಾಗಿರುವ ಮೇ. ಜ್ಯೋತಿ ಅಡ್ವಟೈಸರ್ಸ್ ಇವರನ್ನು ಕಡಲ ತೀರ ಅಭಿವೃದ್ಧಿಗೆ ಅರ್ಹ ಬಿಡ್ಡುದಾರರೆಂದು ಆಯ್ಕೆ ಮಾಡುವ ಮೊದಲು ಈ ಕಡಲ ತೀರಗಳಲ್ಲಿ ಕೈಗೊಳ್ಳಬಹುದಾದ ಪ್ರವಾಸೋದ್ಯಮ ಅಭಿವೃದ್ಧಿ ಅವಕಾಶಗಳ ಕುರಿತು ಹಮ್ಮಿಕೊಂಡಿರುವ/ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ಏಜೆನ್ಸಿಯ ಪ್ರತಿನಿಧಿಗಳು ಪ್ರದರ್ಶಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದ ಕ ಜಿಲ್ಲೆ ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪ ಗೌಡ ಅವರು ಯೋಜನೆಗಳಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಬಗ್ಗೆ ಹಾಗೂ ಸುರಕ್ಷಾ ಕ್ರಮಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದರು.
ಉಪಸಭಾಪತಿಗಳು ಇದಕ್ಕೆ ಪೂರಕವಾಗಿ ಮಹಾನಗರಪಾಲಿಕೆ ಎರಡು ಕೋಟಿ ರೂ.ಗಳನ್ನು ಮ0ಜೂರು ಮಾಡಿಕೊಂಡು ರಸ್ತೆ ಸಂಪರ್ಕ ಹಾಗೂ ತ್ಯಾಜ್ಯ ವಿಲೇಗೆ ಈ ಮೊತ್ತವನ್ನು ಮೀಸಲಿರಿಸಬೇಕೆಂದು ಸಲಹೆ ಮಾಡಿದರು. ಅದೇ ರೀತಿ ಮಕ್ಕಳಿಗೆ ಸಮುದ್ರ ತೀರದಲ್ಲಿ ಪ್ರತ್ಯೇಕ ಪಾಂಡ್ ನಿರ್ಮಿಸಿದರೆ ಪ್ರವಾಸಿಗರಿಗೆ ಅನುಕೂಲ ಎಂದರು. ಯೋಗ, ಮನರಂಜನಾ ಕಾರ್ಯಕ್ರಮ ಸೇರಿದಂತೆ ತಮ್ಮ ಯೋಜನೆಗಳನ್ನು ಬಿಡ್ಡುದಾರರು ಪ್ರದರ್ಶಿಸಿದರು.
ಸೋಮೇಶ್ವರ ಕಡಲತೀರದಲ್ಲಿ ಈ ಯೋಜನೆಗಳೆಲ್ಲವನ್ನು ಒಳಗೊಂಡಂತೆ ಸ್ಕ್ಯೂಬ್ ಡೈವಿಂಗ್, ಪ್ಯಾರಾಸೈಲಿಂಗ್ ಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ನಲ್ಲಿ ವಿವರಿಸಲಾಯಿತು. ಸೌಂಡ್ ಅಂಡ್ ಲೈಟ್ ಪ್ರದರ್ಶನದಿಂದ ಸೋಮೇಶ್ವರ ಕಡಲತೀರ ಆಕರ್ಷಣೀಯವಾಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಇಂಜಿನಿಯರ್ ಮಣಿ ನಾರಾಯಣ್, ಸಿ ಆರ್ ಝಡ್ ನ ಪ್ರಾದೇಶಿಕ ನಿರ್ದೇಶಕರಾದ ಅಮ್ಮಣ್ಣನವರ್, ಮಹೇಶ್ ಕುಮಾರ್, ಪ್ರವಾಸೋದ್ಯಮ ಸಹಾಯಕನಿರ್ದೇಶಕರಾದ ಪ್ರಕಾಶ್, ಎನ್ ಎಂ ಪಿ ಟಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹರಿನಾಥ್, ಮೀನುಗಾರಿಕೆ ಉಪನಿರ್ದೇಶಕರಾದ ಸುರೇಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.