Wednesday, July 27, 2011

ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರದಲ್ಲಿ ಪ್ಲಾಸ್ಟಿಕ್ ನಿಷೇಧ

ಮಂಗಳೂರು,ಜುಲೈ.27:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಣಂಬೂರು ಮತ್ತು ತಣ್ಣೀರುಬಾವಿ ಕಡಲ ತೀರದ ಪ್ರದೇಶಗಳಲ್ಲಿ ಬಳಸಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ವಸ್ತುಗಳು ಮತ್ತು ತ್ಯಾಜ್ಯಗಳು ಕಡಲ ಕಿನಾರೆಯ ಪರಿಸರಕ್ಕೆ ಹಾನಿ ಮಾಡುತ್ತಿದ್ದು,ಇದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತರು ಈ ವಲಯವನ್ನು ಪ್ಲಾಸ್ಟಿಕ್ ನಿಷೇಧ ಪ್ರದೇಶವೆಂದು ಘೋಷಿಸಿ ದಿನಾಂಕ 15-7-11 ರಂದು ಆದೇಶ ಹೊರಡಿಸಿದ್ದಾರೆ.ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಯಾವುದೇ ರೀತಿಯ ಪ್ಲಾಸ್ಟಿಕ್ ಕವರುಗಳು,ಲೋಟಗಳು,ತಟ್ಟೆಗಳನ್ನು ಕ್ಯಾರಿ ಬ್ಯಾಗ್ಗಳ ಉಪಯೋಗ,ದಾಸ್ತಾನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಪ್ರವೇಶ ದ್ವಾರದಲ್ಲಿ ತನಿಖಾ ಠಾಣೆಯನ್ನು ನಿರ್ಮಿಸಿ,ಪ್ಲಾಸ್ಟಿಕ್ ಕವರುಗಳು,ತಟ್ಟೆಗಳು,ಕ್ಯಾರಿಬ್ಯಾಗ್ ಗಳು ಇತ್ಯಾದಿ ಒಳಗೆ ಒಯ್ಯದಂತೆ ತಡೆದು ಮುಟ್ಟುಗೋಲು ಹಾಕಿಕೊಳ್ಳುವುದು,ಸೂಚನಾ ಫಲಕಗಳನ್ನು ಅಳವಡಿಸುವುದು. ಈ ಆದೇಶವನ್ನು ಉಲ್ಲಂಘಿಸಿದವರಿಂದ ನಿಯಮದಂತೆ ದಂಡ ವಸೂಲಿ ಮಾಡತಕ್ಕದ್ದು.ಸಣ್ಣ ಪ್ರಮಾಣದ ದಾಸ್ತಾನಿಗೆ ರೂ.200 ದಂಡ ಮತ್ತು ದೊಡ್ಡ ಪ್ರಮಾಣದ ದಾಸ್ತಾನಿಗೆ ರೂ.1000 ದಂಡವನ್ನು ವಸೂಲಿ ಮಾಡಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿರುತ್ತಾರೆ.