Monday, July 25, 2011

ಡಿಸೆಂಬರ್ ನಲ್ಲಿ ಕರಾವಳಿ ಉತ್ಸವ:ಡಾ.ಎನ್.ಎಸ್.ಚನ್ನಪ್ಪಗೌಡ

ಮಂಗಳೂರು,ಜುಲೈ.25:ಕರಾವಳಿ ಉತ್ಸವವನ್ನು ವೈವಿಧ್ಯಮಯವಾಗಿ ಅತ್ಯಂತ ಆಕರ್ಷಕವಾಗಿ 2011 ರ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲು ಎಲ್ಲಾ ಪೂರ್ವಭಾವೀ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಇವರು ಸೂಚಿಸಿದ್ದಾರೆ. ಅವರು ಶನಿವಾರ ತಮ್ಮ ಕಚೇರಿ ಯಲ್ಲಿ ಈ ಸಂಬಂಧ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕರಾವಳಿ ಉತ್ಸವ ಸಂಬಂಧ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ವಿಪುಲ ಅವಕಾಶಗಳನ್ನು ಕಲ್ಪಿಸಿ ಅಂತೆಯೇ ಖ್ಯಾತನಾಮರ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲು ಸೂಚಿಸಿದರು. ಈ ಬಾರಿಯೂ ಜನಾಕರ್ಷಣೆಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕರಾವಳಿ ಉತ್ಸವ ಮೈದಾನದಲ್ಲಿ ಪ್ರತೀ ವರ್ಷದಂತೆ ಈ ಸಲವೂ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲು ಹಾಗೂ ವಸ್ತು ಪ್ರದರ್ಶನ ಮಳಿಗೆಗಳ ಗುಣಮಟ್ಟ ಹಾಗೂ ಆಕರ್ಷಕವಾಗಿರುವಂತೆ ನಿಗಾವಹಿಸಲು ಸೂಚಿಸಿದರು. ಕದ್ರಿ ಉದ್ಯಾನವನದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.
ಕಳೆದ 2010-11 ನೇ ಸಾಲಿನ ಕರಾವಳಿ ಉತ್ಸವಕ್ಕೆ ಒಟ್ಟಾರೆ ರೂ.44,46,363-00 ವೆಚ್ಚವಾಗಿತ್ತು.ಬೀಚ್ ಉತ್ಸವಕ್ಕೆ ರೂ.10 ಲಕ್ಷ ವೆಚ್ಚ ಮಾಡಲಾಗಿತ್ತು. ಕರಾವಳಿ ಉತ್ಸವಕ್ಕಾಗಿ ಸಂಗ್ರಹವಾದ ದೇಣಿಗೆ ರೂ.60,91,000/- ಗಳೆಂದು ಹಿಂದಿನ ಕರಾವಳಿ ಉತ್ಸವದ ಆದಾಯ ವೆಚ್ಚಗಳನ್ನು ಸಭೆಗೆ ತಿಳಿಸಿದರು.