Tuesday, July 26, 2011

ನಮ್ಮ ಭೂಮಿ ಸೀಮಿತ -ಜನಸಂಖ್ಯೆಯೂ ಸೀಮಿತವಾಗಿರಲಿ-ಡಾ.ಎನ್.ಎಸ್.ಚನ್ನಪ್ಪ ಗೌಡ

ಮಂಗಳೂರು,ಜುಲೈ.26:ಪ್ರಾಣಿ ಸಂಕುಲ ಮಾನವ,ಪಶು ಪಕ್ಷಿಗಳು ವಾಸಿಸಲು ಇರುವ ಭೂಮಿ ಸೀಮಿತ. ಆದರೆ ನಾವು ಮಾನವರು ಇತರೆಲ್ಲಾ ಪ್ರಾಣಿ ವರ್ಗಗಳಿಗಿಂತ ನಮ್ಮಲ್ಲಿ ವಿವೇಚನೆ ಇಲ್ಲದೆ ನಮ್ಮ ಜನಸಂಖ್ಯೆಯನ್ನು ಹೆಚ್ಚುಗೊಳಿಸುತ್ತಿದ್ದೇವೆ. ಇದರಿಂದಾಗಿ ಅತೀ ಶೀಘ್ರದಲ್ಲಿ ನಾವು ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು.ಆದ್ದರಿಂದ ನಮ್ಮ ಭೂಮಿಗೆ ತಕ್ಕುದಾಗಿ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸೋಣ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಜನತೆಗೆ ಕರೆ ನೀಡಿದ್ದಾರೆ.
ಅವರು ಇಂದು ದ.ಕ.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ವೆನ್ಲಾಕ್ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಶೈಕ್ಷಣಿಕ ಮಟ್ಟ ಹೆಚ್ಚಿದರೆ ಜನಸಂಖ್ಯಾ ನಿಯಂತ್ರಣ ಸಾಧಿಸಬಹುದು,ಕುಟುಂಬ ಕಲ್ಯಾಣ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಒಂದು ಕುಟುಂಬಕ್ಕೆ ಒಂದೇ ಮಗು ಸೂತ್ರ ಬದ್ದರಾದಾಗ ಮತ್ತು ಜನಸಂಖ್ಯೆ ನಿಯಂತ್ರಿಸಲು ಸಾಧ್ಯ ಎಂದರು. ಗ್ರಾಮೀಣ ಜನರಲ್ಲಿ ಜನಸಂಖ್ಯಾ ಸ್ಪೋಟಕ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
`` ಜನಸಂಖ್ಯೆಯ ಸ್ಥಿರತೆಗಾಗಿ ನಾವೆಲ್ಲರೂ ಕೈ ಜೋಡಿಸೋಣ '' ಎಂಬ ವಿಷಯದ ಕುರಿತು ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ರುಕ್ಮಿಣಿ ಅವರು ಮಾತನಾಡಿ ದಕ್ಷಿಣಕನ್ನಡ ಜಿಲ್ಲಾ ಜನಸಂಖ್ಯೆ 20,80,627 ಇವರಲ್ಲಿ ಮಹಿಳೆಯರು 10,51,048 ,ಪುರುಷರು 10,32,577 ಇಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು.ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 502 ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಪಟ್ಟಿದ್ದರೆ ಇದೇ ಅವಧಿಯಲ್ಲಿ ಸಂತಾನಹರಣ ಚಕಿತ್ಸೆಗೊಳಪಟ್ಟ ಪುರುಷರ ಸಂಖ್ಯೆ ಕೇವಲ 35 ಆಗಿದ್ದು,ರಾಜ್ಯದಲ್ಲಿ ಜಿಲ್ಲೆ 30 ನೇ ಸ್ಥಾನದಲ್ಲಿದೆ ಎಂದರು.
ಜನಸಂಖ್ಯಾ ಸ್ಪೋಟದಿಂದ ನಿರುದ್ಯೋಗ,ವಸತಿ,ಆಹಾರ ,ಬಟ್ಟೆ ಇವೇ ಮೊದಲಾದ ಇನ್ನು ಹಲವಾರು ಮೂಲಭೂತ ಸಮಸ್ಯೆಗಳು ನಮ್ಮನ್ನು ಕಾಡಲಿವೆ. ಇದರಿಂದ ದೇಶದ ಅಭಿವೃದ್ಧಿಗೆ ಮಹಾ ತೊಡಕಾಗಲಿದೆ. ಸಾಮಾಜಿಕ ಕ್ಷೊಭೆಯೂ ಉಂಟಾಗಲಿದೆ. ಆದ್ದರಿಂದ ನಾವು ಜನಸಂಖ್ಯೆ ನಿಯಂತ್ರಣ ಮಾಡಲೇ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ,ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಮೇಶ್ವರ್ ಮುಂತಾದವರು ಭಾಗವಹಿಸಿದ್ದರು.