Friday, July 29, 2011

'ಶಾಲಾ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸದಿರಿ'

ಮಂಗಳೂರು,ಜುಲೈ.29: ಜಿಲ್ಲೆಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಾಲಾ ಕೆಲಸಗಳಿಗೆ (ಕಸಗುಡಿಸುವುದು/ ಶೌಚಾಲಯ ತೊಳೆಯುವುದು/ಶಿಕ್ಷಕರ ಖಾಸಗಿ ಕೆಲಸಗಳನ್ನು ಮಾಡುವುದು) ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು ಶಾಲೆಗಳಲ್ಲಿ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಷೇಧಿಸಿ ವಿದ್ಯಾಂಗ ಇಲಾಖೆಯ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಮಕ್ಕಳ ಹಕ್ಕುಗಳ ಅಧಿನಿಯಮ 2009ರ ನಿಯಮ 17ರಲ್ಲಿ ಯಾವ ಮಗುವನ್ನು ದೈಹಿಕ ದಂಡನೆ ಅಥವಾ ಮಾನಸಿಕ ಕಿರುಕುಳಕ್ಕೆ ಗುರಿಪಡಿಸಿದಲ್ಲಿ ಇದಕ್ಕೆ ಕಾರಣರಾದವರನ್ನು ಶಿಸ್ತು ಕ್ರಮಕ್ಕೆ ಒಳಪಡಿಸತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಆದುದರಿಂದ ಇನ್ನು ಮುಂದೆ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶಾಲಾ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಉಪಯೋಗಿಸಬಾರದು. ಹಾಗೂ ದೂರುಗಳು ಬಂದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು, ಆಡಳಿತಮಂಡಳಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ.