Tuesday, July 5, 2011

ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಸುಸಜ್ಜಿತಗೊಳಿಸುವ ಗುರಿ:ಕೃಷ್ಣ ಜೆ.ಪಾಲೇಮಾರ್

ಮಂಗಳೂರು,ಜುಲೈ.05:ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾವಂತರಾಗಬೇಕಾದರೆ ಅವರು ಕಲಿಯುವ ಶಾಲೆಗಳ ಪರಿಸರ ಅತ್ಯಂತ ಅಹ್ಲಾದಕರವಾಗಿದ್ದು,ಸುಸಜ್ಜಿತವಾಗಿರಬೇಕು.ಇದಕ್ಕಾಗಿ ಜಿಲ್ಲೆಯ ಎಲ್ಲಾ ಸರಕಾರಿಶಾಲೆಗಳಿಗೆ ಪೀಠೋಪಕರಣಗಳ ಜೊತೆಗೆ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದು,ಇನ್ನು ಎರಡು ವರ್ಷಗಳಲ್ಲಿ ಈ ಕಾರ್ಯ ಪೂರ್ಣ ಗೊಳಿಸುವುದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ,ಜೀವಿಶಾಸ್ತ್ರ,ಪರಿಸರ,ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ತಿಳಿಸಿದ್ದಾರೆ.
ಅವರು ಇಂದು ಕರ್ನಾಟಕ ಸರ್ಕಾರದ ನೂತನ ಮಹತ್ವಾಕಾಂಕ್ಷಿ ಯೋಜನೆ ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಅಂಗವಾಗಿ ಮಂಗಳೂರು ತಾಲೂಕಿನ ಮುಂಚೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಂದು ಮಗುವೂ ಶಾಲೆಯಿಂದ ಹೊರಗುಳಿಯಬಾರದು ಎಂಬ ಗುರಿಯನ್ನು ಕಳೆದ ಸಾಲಿನಲ್ಲಿ ತಾವು ಹಮ್ಮಿಕೊಂಡು ಕಾರ್ಯತತ್ಪರರಾದ ಪರಿಣಾಮ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಖಳ ಸಂಖ್ಯೆ ಶೂನ್ಯವಾಗಿದೆ ಎಂದ ಸಚಿವರು ಜಿಲ್ಲೆಯಲ್ಲಿ 3.60 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಜಿಲ್ಲೆಯಲ್ಲಿ 33 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಹೊಸದಾಗಿ ತೆರೆಯಲಾಗಿದ್ದು ರೂ.19 ಕೋಟಿ ವೆಚ್ಚದಲ್ಲಿ 533 ಕ್ಕೂ ಹೆಚ್ಚು ಶಾಖಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ 28 ಪ್ರೌಢಶಾಲೆಗಳನ್ನು ಕಳೆದ ಮೂರು ವರ್ಷದಲ್ಲಿ ನೂತನವಾಗಿ ಆರಂಭಿಸುವಮೂಲಕ ಇವುಗಳ ಮೂಲಭೂತ ಅಭಿವೃದ್ಧಿಗೆ 12 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಲಾಗಿದೆ ಎಂದರು.ಸರಕಾರಿ ಶಾಲೆಗಳು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಶೈಕ್ಷಣಿಕ ಪ್ರಗತಿ ಯನ್ನು ಹೊಂದು ತ್ತಿದ್ದು, ಪೋಷ ಕರು ತಮ್ಮ ಮಕ್ಕಳನ್ನು ಹೆಚ್ಚು ಡೋನೇಷನ್ ನೀಡಿ ಖಾಸಗಿ ಶಾಲೆಗಳಿಗೆ ಕಳುಹಿಸುವ ಬದಲು ಸರಕಾರಿ ಶಾಲೆಗಳಿಗೆ ಸೇರಿಸಿ ಶಾಲೆ ನಮ್ಮದು ಎಂಬ ಮನೋಭಾವ ಹೊಂದಿ ಶಾಲೆಗೆ ಆಗಾಗ ಭೇಟಿ ನೀಡಿ ಸಣ್ಣ ಕೆಲಸಗಳಿಗೆ ಸರ್ಕಾರದೆಡೆ ನೋಡುವುದಕ್ಕಿಂತ ತಾವೇ ಖುದ್ದು ಮಾಡುವ ಮೂಲಕ ಶಾಲಾಭಿವೃದ್ಧಿಗೆ ನೆರವಾಗಬೇಕೆಂದರು.ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 2080 ಹಾಗೂ ಪ್ರೌಢಶಾಲೆಗಳಲ್ಲಿ 1800 ಇಕೋ ಕ್ಲಬ್ಗಳನ್ನು ಸ್ಥಾಪಿಸಲಾಗುವುದೆಂದು ಸಚಿವರು ತಿಳಿಸಿದರು. ಉತ್ತಮ ಪರಿಸರವನ್ನು ಹೊಂದಿದ ಸರಕಾರಿ ಶಾಲೆಗೆ ಪುರಸಭೆ,ನಗರಸಭೆ,ಮಹಾನಗರಪಾಲಿಕೆಗಳಿಗೆ ಪರಿಸರ ಇಲಾಖೆ ವತಿಯಿಂದ ಪರಿಸರ ಪ್ರಶಸ್ತಿಯನ್ನು ನೀಡಲಾಗುವುದೆಂದು ಸಚಿವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಮಾತನಾಡಿದರು.
ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಲರಾದ ಫಿಲೋಮಿನಾ ಲೋಬೋ,ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೊಸೆಸ್ ಜಯಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಶೆಟ್ಟಿಗಾರ್ ಮುಂತಾದವರು ಪಾಲ್ಗೊಂಡಿದ್ದರು