ರಾಜ್ಯ ಸರಕಾರವು 2011-12 ನೇ ಸಾಲಿನ ಆಯವ್ಯಯದಲ್ಲಿ ಬಾಕಿ ಇರುವ ಪೋಡಿ ಕಡತಗಳ ವಿಲೇವಾರಿ ಕೆಲಸವನ್ನು ಪೂರ್ಣ ಮಾಡಲು ಕಾರ್ಯಕ್ರಮ ಘೋಷಿಸಿದೆ. ಸರ್ಕಾರಿ ಜಮೀನುಗಳು ಒತ್ತುವರಿಯಿಂದ ದುರ್ಬಳಕೆಯಾಗುತ್ತಿರುವುದನ್ನು ಗಮನಿಸಿ ಸರ್ಕಾರಿ ಭೂಮಿಯಾದ ಗೋಮಾಳ ಗುಂಡು ತೋಪು ಸೇಂದಿವನ-ಪೊರಂಬೋಕು ಇತ್ಯಾದಿಗಳನ್ನು ಅಳತೆಯಿಂದ ಸಮಗ್ರವಾಗಿ ಗುರುತಿಸಿ ಸಂರಕ್ಷಿಸುವ ಕಾರ್ಯವನ್ನು ಕೈಗೊಂಡಿದೆ. ಕೃಷಿಗೆ ಜಲವೇ ಆಧಾರವೆಂಬಂತೆ ಇರುವ ಕೆರೆ ಕುಂಟೆ ಹಳ್ಳ ಇತ್ಯಾದಿಗಳಲ್ಲಿಯೂ ಒತ್ತುವರಿಯಾಗಿ ನೀರಿನ ಹರಿವಿಗೆ ಭಾದಕವಾಗಿರುವ ಒತ್ತುವರಿ ಗುರುತಿಸಿ ತೆರವುಗೊಳಿಸುವ ಕಾರ್ಯವನ್ನೊಳಗೊಂಡ ಕಾರ್ಯಕ್ರಮವನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಘೋಷಿಸಿದೆ.ದಕ್ಷಿಣಕನ್ನಡ ಜಿಲ್ಲೆಯ ರೈತರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಅಳತೆ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಕಂದಾಯ ಹಾಗೂ ಭೂಮಾಪನ ಅಧಿಕಾರಿ/ಸಿಬ್ಬಂದಿ ತಂಡ ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲಿ ಭೂವ್ಯಾಜ್ಯಗಳ ನಿವಾರಣೆ ಮಾಡಿಕೊಳ್ಳಬಹುದಾಗಿದೆಯೆಂದು ಮಂಗಳೂರು ತಾಲೂಕು ತಹಶೀಲ್ದಾರರು ತಿಳಿಸಿರುತ್ತಾರೆ.