
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಜಾಗೃತಿ ಜಾಥಾ ಸುಳ್ಯದಿಂದ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮೂಲಕ ಮಂಗಳೂರು ನಗರ ಪ್ರವೇಶ ಮಾಡಲಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಕಲಾವಿದರನ್ನೊಳಗೊಂಡಂತೆ 150 ರಿಂದ 200 ಕಲಾವಿದರು ಜಾಥಾದಲ್ಲಿ ಪಾಲ್ಗೊಳ್ಳುವರು. ಮೂರು ತೇರುಗಳಲ್ಲಿ ತಾಯಿ ಭುವನೇಶ್ವರಿ, ಕನ್ನಡ ಅಕ್ಷರ ಪರಂಪರೆ, ಚಿತ್ರಗಳನ್ನೊಳಗೊಂಡಿವೆ. ಅಕ್ಟೋಬರ್ 12ರಂದು ಬೆ. 11 ಗಂಟೆಗೆ ಕಾರ್ಯಕ್ರಮ ಸುಳ್ಯದಲ್ಲಿ ಉದ್ಘಾಟನೆಯಾಗಲಿದ್ದು, ಅಪರಾಹ್ನ 1.30ಕ್ಕೆ ಸುಳ್ಯದಿಂದ ಪುತ್ತೂರಿಗೆ ಆಗಮಿಸಲಿದೆ. ಪುತ್ತೂರಿನಲ್ಲಿ ಮೆರವಣಿಗೆ, ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಂಜೆ ಆರು ಗಂಟೆಗೆ ಬೆಳ್ತಂಗಡಿಗೆ ತೆರಳಿ ವಾಸ್ತವ್ಯ. ಬೆಳ್ತಂಗಡಿಯಲ್ಲಿ ಬೆ. 10ರಿಂದ ಮೆರವಣಿಗೆ, 11.30ಕ್ಕೆ ಸಭಾ ಕಾರ್ಯಕ್ರಮ ಅಪರಾಹ್ನ ಬಂಟ್ವಾಳಕ್ಕೆ ತೇರು ಆಗಮಿಸಲಿದೆ. ಸಂಜೆ 5.30ಕ್ಕೆ ಬಂಟ್ವಾಳದಿಂದ ಮಂಗಳೂರಿಗೆ ಆಗಮಿಸುವ ಕನ್ನಡ ತೇರು ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದೆ. ಮಂಗಳೂರಿನಲ್ಲಿ ಬೆಳಗ್ಗೆ ಮೆರವಣಿಗೆ, 10ರಿಂದ 11.30 ನಗರದ ಪುರಭವ ನದಲ್ಲಿ ಸಭಾ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಸ್ಥಳೀಯ ಕಲಾ ತಂಡಗಳಿಗೂ ಈ ಸಂದರ್ಭದಲ್ಲಿ ಆದ್ಯತೆ ನೀಡಲಾಗುವುದು. ಅಪರಾಹ್ನ ಮಂಗಳೂರಿನಿಂದ ಮೂಡಬಿದ್ರೆಗೆ ಕನ್ನಡ ತೇರು ತೆರಳಲಿದೆ.
ಗಡಿನಾಡು ಸುಳ್ಯದಲ್ಲಿ ಇದೇ ಸಂದರ್ಭದಲ್ಲಿ ಗಡಿಭವನಕ್ಕೆ ಮುಖ್ಯಮಂತ್ರಿಗಳು ಶಿಲನ್ಯಾಸ ಮಾಡಲಿರುವುದಾಗಿ ವಿಷ್ಣು ನಾಯಕ್ ಅವರು ಹೇಳಿದರು.
ಕನ್ನಡ ಜಾಗೃತಿ ತೇರು ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಎಲ್ಲ ನೆರವನ್ನೂ ನೀಡುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು. ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸುತ್ತೋಲೆ ಹಾಕುವುದಾಗಿಯೂ ಜಿಲ್ಲಾಧಿಕಾರಿಗಳು ಹೇಳಿದರು. ಉಪಮೇಯರ್ ಶ್ರೀಮತಿ ಗೀತಾ ನಾಯಕ್, ವಿದ್ಯಾಂಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಮಹಿಳಾ ಒಕ್ಕೂಟದ ಶ್ರೀಮತಿ ವಿಜಯಲಕ್ಷ್ಮಿ, ತಾಲೂಕು ಕಸಾಪ ಅಧ್ಯಕ್ಷರಾದ ಸರ್ವೋತ್ತಮ ಅಂಚನ್ ಸೇರಿದಂತೆ ಕಲಾ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.