Thursday, September 15, 2011

ಭಾರತ ಸ್ವಾತಂತ್ರ್ಯ ಸಂಗ್ರಾಮ 150ನೇ ವರ್ಷಾಚರಣೆ

ಮಂಗಳೂರು,ಸೆಪ್ಟೆಂಬರ್.15 : ಭಾರತ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆ.17 ಮತ್ತು 18 ರಂದು ಉಚ್ಚಿಲ (ಉಳ್ಳಾಲ) ಬೋವಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನ ಸೋಮೇಶ್ವರ ಉಚ್ಚಿಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ವೆಂ. ನಾಯಕ್ ತಿಳಿಸಿದರು.
ಇಂದು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಕೃತಿ ಮಂತ್ರಾಲಯ ನವದೆಹಲಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸುವರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕರುಣಾಕರ್ ಉಚ್ಚಿಲ್ ಅವರ ವಿಶೇಷ ಉಪಸ್ಥಿತಿಯಿದ್ದು,ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರನ್ನೊಳಗೊಂಡಂತೆ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಮಂಗಳೂರು ವಿಧಾನಸಭಾ ಶಾಸಕರಾದ ಯು ಟಿ ಖಾದರ್ ಅವರು ಅಧ್ಯಕ್ಷತೆ ವಹಿಸುವರು.
17ರಂದು ಸಂಜೆ 6.30ಕ್ಕೆ ಆರಂಭಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮೃತಾ ಕಿಣಿ ಮತ್ತು ಬಳಗದವರಿಂದ ದೇಶ ಭಕ್ತಿ ಗೀತೆಗಳು, ಪ್ರಮೋದ್ ಉಳ್ಳಾಲ ಬಳಗದಿಂದ ನೃತ್ಯ ರೂಪಕ, ಗಿರೀಶ್ ನಾವಡರಿಂದ ಯಕ್ಷಗಾನ ನಡೆಯಲಿದೆ.
18 ರಂದು ಸಂಜೆ 6ಕ್ಕೆ ಜಗದೀಶ್ ಶಿವಪುರ ಬಳಗದಿಂದ ದೇಶಭಕ್ತಿ ಗೀತೆಗಳು, ಸನಾತನ ನಾಟ್ಯಾಲಯದಿಂದ ನೃತ್ಯರೂಪಕ, ರಂಗಸ್ಪಂದನ, ಮಹಿಳಾ ಕಲಾವಿದರಿಂದ ನಾಟಕ ಕಾರ್ಯಕ್ರಮ ಪ್ರದರ್ಶಿತವಾಗಲಿದೆ.
ಈ ಕಾರ್ಯಕ್ರಮಕ್ಕೆ ಪೂರಕವಾಗಿ ಮೂರು ದಿನಗಳ ಚಿತ್ರಕಲಾ ಶಿಬಿರವನ್ನು 16ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದ್ದು, ಶಾಸಕ ಯು ಟಿ ಖಾದರ್ ಅವರು ಶಿಬಿರವನ್ನು ಉದ್ಘಾಟಿಸುವರು. 18ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಮಹಿಳೆಯರಿಗೆ ಮತ್ತು ಪುರುಷರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು ಹಾಗೂ ಸ್ಥಳೀಯ ಎಲ್ಲಾ ಸಂಘಸಂಸ್ಥೆಗಳು ಸಹಕಾರ ನೀಡಿವೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದರು.