ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವಿವಿಧ ದಿನಾಚರಣೆಗಳಂದು ಕಾನೂನಿನ ಬಗ್ಗೆ ಸಮಾಜದ ದುರ್ಬಲ ವರ್ಗಗಳಿಗೆ ಕಾನೂನು ಮಾಹಿತಿ ಹಾಗೂ ನೆರವು ನೀಡುವ ಕಾರ್ಯಕ್ರಮಗಳನ್ನು ನೀಡಿ ಎಂದರು. ಅಕ್ಟೋಬರ್ ಒಂದರಂದು ಪುರಭವನದಲ್ಲಿ ಹಿರಿಯ ನಾಗರೀಕರ ದಿನಾಚರಣೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿ ಎಂದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 2ರಂದು ಮಹಾತ್ಮಗಾಂಧಿ ಜಯಂತಿ ಯಂದು ನಡೆಸುವ ಕಾರ್ಯಕ್ರಮಗಳಡಿ ಮಧ್ಯಸ್ಥಿಕೆ ಮತ್ತು ಸಂಧಾನದ ವಿಧಾನದ ವಿಷಯಗಳ ಬಗ್ಗೆ ವಿಚಾರಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯವರಿಗೆ ಸೂಚಿಸಿದರು.10.10.11ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಮಾನಸಿಕ ರೋಗಗಳ ಹಕ್ಕುಗಳ ಬಗ್ಗೆ, ಅಧಿನಿಯಮದ ಬಗ್ಗೆ, ಅವರಿಗೆ ಉಚಿತ ಕಾನೂನು ಸೇವೆ ನೀಡುವ ಬಗ್ಗೆ ರೋಶನಿ ಕಾಲೇಜಿನೊಂದಿಗೆ ಸಮನ್ವಯ ಸಾಧಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂಪನ್ಮೂಲ ವ್ಯಕ್ತಿಗಳನ್ನು ನೀಡಿ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ರಾಜೇಶ್ ಅವರು ಕಾರ್ಯಕ್ರಮ ರೂಪಿಸಲು ಸಮನ್ವಯಾಧಿಕಾರಿಯಾಗ ಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಕಾನೂನು ಸಾಕ್ಷರತೆ, ಕಾರ್ಯಾಗಾರ, ಮಕ್ಕಳಿಗೆ ಸಂಬಂಧಿಸಿದ ಕಾನೂನಿನಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು. ಕಾರ್ಯಕ್ರಮಗಳ ಬಗ್ಗೆ ಪ್ರಚಾರವನ್ನು ಮಾಧ್ಯಮಗಳು ನೀಡಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದರು. ಕಾರ್ಮಿಕ ಇಲಾಖೆಯನ್ನೊಳಗೊಂಡಂತೆ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಹಿರಿಯ ನ್ಯಾಯಾಧೀಶರಾದ ರಾಜಶೇಖರ್ ಪಾಟೀಲ್ ಉಪಸ್ಥಿತರಿದ್ದರು.