Monday, September 12, 2011

ನನ್ನ ಮನೆ-ನನ್ನ ಸ್ವತ್ತು ಯೋಜನೆ ಅನುಷ್ಠಾನ

ಮಂಗಳೂರು,ಸೆಪ್ಟೆಂಬರ್.12: 2011-12ರ ಆಯವ್ಯಯದಲ್ಲಿ ಸರ್ಕಾರವು ನನ್ನ ಮನೆ ನನ್ನ ಸ್ವತ್ತು ಎಂಬ ನೂತನ ಯೋಜನೆಯನ್ನು ಜ್ಯಾರಿ ಮಾಡಿದ್ದು,ರಾಜ್ಯದಲ್ಲಿ ಆಶ್ರಯ ಯೋಜನೆ,ಮತ್ತಿತರ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳು ಪಡೆದಂತಹ ಸಂಪೂರ್ಣ ಸಾಲವನ್ನು ಒಂದೇ ಕಂತಿನಲ್ಲಿ ಮರುಪಾವತಿಸಲು ಮುಂದೆ ಬಂದರೆ ಅವರ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಹಾಗೂ ಅವರ ನಿವೇಶನ/ಮನೆಯನ್ನು ಅಡಮಾನದಿಂದ ಮುಕ್ತಿಗೊಳಿಸಲು ನಿರ್ಧರಿಸಲಾಗಿದೆ.
ಜನತಾ ಮನೆ,ಭಾಗ್ಯ ಮಂದಿರ,ನೆರಳಿನ ಭಾಗ್ಯ,ಗ್ರಾಮೀಣ ಆಶ್ರಯ,ನಗರ ಆಶ್ರಯ,ನಗರ ಅಂಬೇಡ್ಕರ್,ಎಂಎಂಜಿವೈ ಸಾಲ ಮತ್ತು ಸಹಾಯಧನ ಯೋಜನೆ, ವಿಶೇಷ ವರ್ಗದ ಯೋಜನೆಗಳು ಹಾಗೂ ಇತ್ಯಾದಿ ವಸತಿ ಯೋಜನೆಗಳಡಿಯಲ್ಲಿ ಸಂಪೂರ್ಣ ಸಾಲ ಅಥವಾ ಸಾಲ ಮತ್ತು ಸಹಾಯಧನ ಪಡೆದು ಮನೆಗಳನ್ನು ನಿರ್ಮಿಸಿಕೊಂಡ ಎಲ್ಲಾ ವರ್ಗದ ಫಲಾನುಭವಿಗಳು ತಮ್ಮ ಸಾಲವನ್ನು ಸಂಪೂರ್ಣ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ ಅಂದರೆ ದಿನಾಂಕ 31-3-12 ರೊಳಗೆ ಸಂಪೂರ್ಣ ಮೊತ್ತವನ್ನು ಮರು ಪಾವತಿಸಿದರೆ ಅಂತಹವರ ಬಡ್ಡಿಯನ್ನು ಮನ್ನಾ ಮಾಡಿ ಮನೆಯನ್ನು ಅಡಮಾನದಿಂದ ಋಣ ಮುಕ್ತಗೊಳಿಸಲಾಗುವುದು.
ಈ ಯೋಜನೆಯು 31-3-2011 ರ ಅಂತ್ಯಕ್ಕೆ ವಿವಿಧ ವಸತಿ ಯೋಜನೆಗಳಡಿಯಲ್ಲಿ ಪೂರ್ಣಗೊಂಡ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. 2011-12 ನೇ ಸಾಲಿನ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಸರ್ಕಾರ ತನ್ನ ಆದೇಶದಲ್ಲಿ ಸೂಚಿಸಿರುತ್ತದೆ.