Thursday, September 8, 2011

ನವರಾತ್ರಿಯಂದು ರಂಗಮಂದಿರ ಕಾಮಗಾರಿಗೆ ಚಾಲನೆ

ಮಂಗಳೂರು,ಸೆಪ್ಟೆಂಬರ್.08:ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ನವರಾತ್ರಿಯಂದು ಆರಂಭಿಸಲು ಉಪಸಭಾಪತಿಗಳು ಹಾಗೂ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎನ್. ಯೋಗೀಶ್ ಭಟ್ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಬೋಂದೆಲ್ ನಲ್ಲಿ ಮೂರೂವರೆ ಎಕರೆ ಪ್ರದೇಶವನ್ನು ಗುರುತಿಸಿದ್ದು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧವಾಗಿದೆ ಎಂದರು.
1,400 ಸೀಟುಗಳನ್ನು ಹೊಂದಿರುವ ರಂಗಮಂದಿರದ ವಿನ್ಯಾಸ ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.ಕಸಾಪ ವತಿಯಿಂದ ನಿರ್ಮಾಣಕ್ಕೆ ಅನುದಾನವನ್ನೂ ನೀಡಲು ಬದ್ಧ ಎಂದೂ ಅವರು ಸಭೆಗೆ ತಿಳಿಸಿದರು.
ನವ್ಯ- ಭವ್ಯ ವಿನ್ಯಾಸವನ್ನು ಮೂರು ದಿನಗಳೊಳಗೆ ಅಂತಿಮಗೊಳಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.ಕಡಿಮೆ ವೆಚ್ಚ ಮತ್ತು ಉತ್ತಮ ಗುಣಮಟ್ಟವನ್ನು ಗಮನದಲ್ಲಿರಿಸಿ ಕರ್ತವ್ಯ ನಿರ್ವಹಿಸಿ ಎಂದೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.ಅಧಿಕಾರಿಗಳು, ವಿನ್ಯಾಸಗಾರರು, ಕಲಾವಿದರು ಸಭೆಯಲ್ಲಿ ಉಪಸ್ಥಿತರಿದ್ದರು.