Saturday, April 6, 2013

ಮೂಡುಬಿದಿರೆಯಲ್ಲಿ ಮಹಿಳೆಯರಿಂದ ಮತದಾನ ಹಕ್ಕು ಜಾಗೃತಿ ಜಾಥಾ

ಮೂಡುಬಿದಿರೆ: ಎಪ್ರಿಲ್ 06 :  ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತಿ ಮಂಗಳೂರು, ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇವುಗಳ ಸಹಯೋಗದಲ್ಲಿ ಮಹಿಳೆಯರಿಂದ  'ಮತದಾನ ಹಕ್ಕು ಬಗ್ಗೆ ಜಾಗೃತಿ ಜಾಥಾ'  ಶನಿವಾರ ಮೂಡುಬಿದಿರೆಯಲ್ಲಿ  ನಡೆಯಿತು.
ಸಂಜೆ ಸ್ವರಾಜ್ ಮೈದಾನದಿಂದ ಆರಂಭವಾದ ಜಾಥಾ ಹಳೆಪೊಲೀಸ್ಠಾಣೆವರೆಗೆ ತೆರಳಿ ಅಲ್ಲಿಂದ ಅಮರಶ್ರೀ ಟಾಕೀಸು ರಸ್ತೆಯಲ್ಲಿ  ಹಿಂತಿರುಗಿ ಬಸ್ನಿಲ್ದಾಣದ ಮೂಲಕ ಸಮಾಜ  ಮಂದಿರದಲ್ಲಿ ಸಂಪನ್ನಗೊಂಡಿತು.
   ಬಳಿಕ ಸಮಾಜ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಹಶಿಲ್ದಾರ್ ಬಸವರಾಜ್ ಪಳೋಟಿ ಸಭಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿ ಮತದಾನ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಅದನ್ನು ಯಾರ ಪ್ರಭಾವಕ್ಕೊಳಗಾಗದೆ ನಿರ್ಭಿತಿಯಿಂದ ಚಲಾಯಿಸಬೇಕು. ಮೇ 5 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲಿರುವವರನ್ನು ಗುರುತಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ಓರ್ವ ಅಂಗನವಾಡಿ ಕಾರ್ಯಕರ್ತ ಇಂತಹ 10 ಮಂದಿಯನ್ನು ಮತಚಲಾಯಿಸುವಂತೆ ಮಾಡಿದರೆ ಜಿಲ್ಲಾಡಳಿತದ ಸೂಚನೆಯಂತೆ ಅವರಿಗೆ 500 ರೂಪಾಯಿ ಬಹುಮಾನ ಇದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ ಸಿ.ಕೆ ಮಾತನಾಡಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು. ಎ.ಎಸ್.ಐ ಸುಂದರ ಉಪಸ್ಥಿತರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಸ್ವಾಗತಿಸಿದರು. ಮೇಲ್ವಿಚಾರಕಿ ಮಾಲತಿ ವಂದಿಸಿದರು.