Tuesday, April 2, 2013

ಎರಡು ಕಡೆ ಹೆಸರು ದಾಖಲಿಸಿದರೆ ಕ್ರಿಮಿನಲ್ ಕೇಸ್: ಜಿಲ್ಲಾಧಿಕಾರಿ

ಮಂಗಳೂರು, ಏಪ್ರಿಲ್.02 : ಜಿಲ್ಲೆಯಲ್ಲಿ ಗಡಿ ಪ್ರದೇಶಗಳಲ್ಲಿರುವ ಮತದಾನ ಕೇಂದ್ರಗಳಲ್ಲಿ ನಕಲಿ ಮತದಾನದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಮತದಾನದ ವೇಳೆ ಸಮಸ್ಯೆಗಳು ಉದ್ಭವವಾಗದಂತೆ ಮುನ್ನೆಚ್ಚರಿಕೆಯಿಂದ ಮತದಾರರ ಪಟ್ಟಿ ಪರಿಶೀಲಿಸಲು ಎಲ್ಲ ಬಿಎಲ್ ಒ, ತಹಸೀಲ್ದಾರ್ ಅವರುಗಳಿಗೆ ಮತ್ತು ಉಸ್ತುವಾರಿ ಹೊಣೆಯನ್ನು ಸಹಾಯಕ ಆಯುಕ್ತರಿಗೆ ವಹಿಸಲಾಗಿದೆ.
ಇತ್ತೀಚಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಗುಂಪಿನಲ್ಲಿ ಮತ ಚಲಾಯಿಸಿದ ಬಗ್ಗೆ ದೂರುಗಳು ಬಂದಿದ್ದು, ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಾಗ ಅವರ ತವರೂರುಗಳಲ್ಲಿ ಹೆಸರಿರಬಾರದು. ಹಾಗೇನಾದರೂ ಎರಡು ಕಡೆ ಹೆಸರು ದಾಖಲಿಸಿದ ಪ್ರಕರಣ ಪತ್ತೆಯಾದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗವುದು ಎಂದು ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಎಚ್ಚರಿಕೆ ನೀಡಿದ್ದಾರೆ.