Wednesday, April 17, 2013

ವ್ಯವಸ್ಥಿತ ಚುನಾವಣೆಗೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಮಂಗಳೂರು,ಏಪ್ರಿಲ್.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ನಿಭಾಯಿಸಲು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಂಗಳವಾರ ಸಂಜೆ ರಿಟರ್ನಿಂಗ್ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.
ಸಭೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಸಮಗ್ರ ತರಬೇತಿ ನೀಡುವ ಬಗ್ಗೆ ಹಾಗೂ ಪೂರ್ವತಯಾರಿ ಬಗ್ಗೆ ಅಧಿಕಾರಿಗಳಿಂದ ಅಭಿಪ್ರಾಯಪಡೆದರು. ಸಮಗ್ರ ವ್ಯವಸ್ಥೆಯನ್ನು ತಾಂತ್ರಿಕತೆ ಹಾಗೂ ಅಧಿಕಾರಿಗಳಿ ನೆರವಿನಿಂದ ಅಪಡೇಟ್ ಮಾಡಲು ಮುಂದಾಗಿರುವ ಜಿಲ್ಲಾಧಿಕಾರಿಗಳು ಇತರ ಅಧಿಕಾರಿಗಳು ತಮ್ಮ ಉದ್ದೇಶವನ್ನು ಅರ್ಥಮಾಡಿಕೊಂಡು ಅದೇ ರೀತಿಯ ಮುನ್ನುಗ್ಗುವಿಕೆಯಿಂದ ಕಾರ್ಯತತ್ಪರರಾಗಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಹಾಗೂ ವೆಚ್ಚದ ಮೇಲೆ ತೀವ್ರ ನಿಗಾ ವಹಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್, ವಿಡಿಯೋ ಸರ್ವೆಲೆನ್ಸ್ ತಂಡಗಳಿವೆ. ಸೆಕ್ಟರ್ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲಾಗುವುದು. ಎಲ್ಲ ಪ್ರಿಸೈಂಡಿಗ್ ಅಧಿಕಾರಿಗಳಿಗೂ ತರಬೇತಿ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಅಧಿಕಾರಿಗಳಿಗೂ ಸಮಗ್ರ ತರಬೇತಿ ಹಾಗೂ ಮಾಹಿತಿ ನೀಡುವ ಬಗ್ಗೆ ಆರ್ ಒ ಗಳಿಗೆ ಸೂಚನೆ ನೀಡಿದರು.  ಸೆಕ್ಟರ್ ಅಧಿಕಾರಿಗಳಿಗೆ ಏಪ್ರಿಲ್ 19ರಂದು ತರಬೇತಿ ಆಯೋಜಿಸಲಾಗಿದೆ.
ಪೋಸ್ಟಲ್ ಬ್ಯಾಲೆಟ್ ಬಗ್ಗೆ ಸವಿವರ ಚರ್ಚೆ ನಡೆದು ಸಭೆಯಲ್ಲಿ ಮತದಾನದಲ್ಲಿ ಲೋಪಗಳನ್ನು ಕನಿಷ್ಠಗೊಳಿಸಲು ಪೋಸ್ಟಲ್ ಬ್ಯಾಲೆಟ್ ರಿಜಿಸ್ಟರ್ ನ್ನು ಮುಂಚಿತವಾಗಿ ರಚಿಸಲು ಸೂಚಿಸಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯವಿರುವ ವಾಹನಗಳು ಹಾಗೂ ರೂಟ್ ಮ್ಯಾಪ್ ಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ರೂಟ್ ಮ್ಯಾಪ್ ಗೆ ಹಾಗೂ ಇದಕ್ಕೆ ಪೂರಕ ವ್ಯವಸ್ಥೆ ಒದಗಿಸಲು  ವಿಶೇಷ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಲು ನಿರ್ದೇಶನ ನೀಡಿದರು.
ದೂರುಗಳು ನಮಗೆ ಬರಲಿ ಎಂದು ಕಾಯದೆ ಸ್ವಯಂಪ್ರೇರಿತವಾಗಿ ದೂರುಗಳನ್ನು ಅರಸಿ ವರದಿ ಮಾಡಿ ಎಂದ ಜಿಲ್ಲಾಧಿಕಾರಿಗಳು, ಅಗತ್ಯ ಮೂಲಸೌಕರ್ಯಗಳನ್ನು ಸಿದ್ದಪಡಿಸಿಕೊಳ್ಳಿ. ಇವಿಎಂ ನ ಸೆಕೆಂಡ್ ರ್ಯಾಂಡಮೈಸೇಷನ್ ಬಗ್ಗೆ ಈ ಸಂದರ್ಭದಲ್ಲಿ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯನ್ನು ಖಾತರಿಪಡಿಸಿಕೊಳ್ಳಿ ಎಂದ ಅವರು, ಎಲ್ಲ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿರಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.