Friday, April 12, 2013

ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು, ಎಪ್ರಿಲ್. 12:- ಶಿಸ್ತಿನ ಜೀವನ ಕ್ರಮ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ನಿರ್ವಹಿಸುವ ಮೂಲಕ ಆರೋಗ್ಯ ರಕ್ಷಣೆ ಸಾಧ್ಯ ಎಂದು ತಿಳಿಸುತ್ತಾ ನಿಯಮಿತ ಆಹಾರ, ವಿಶ್ರಾಂತಿಗಳ ಮೂಲಕ ರಕ್ತದೊತ್ತಡ ನಿಯಂತ್ರಣ ಸಾಧ್ಯವೆಂದು ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ .ಸಿ.ಎ. ರಾಘವೇಂದ್ರರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
        ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯೊಂದಿಗೆ ಜಿಲ್ಲಾ ಮಟ್ಟದ ವಿಶ್ವ ಆರೋಗ್ಯ ದಿನಾಚರಣೆಯನ್ನು ದಿನಾಂಕ:12-04-2013ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀನಿವಾಸ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಯಿತು.
   ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀನಿವಾಸ್ ಕಾಲೇಜು, ಪಾಂಡೇಶ್ವರ ಇಲ್ಲಿಯ ಹಿರಿಯ ವೈದ್ಯಾಧಿಕಾರಿ, ಡಾ||. ಎಂ. ಅಣ್ಣಯ್ಯ ಕುಲಾಲ್ ಇವರು 'ಅಧಿಕ ರಕ್ತದೊತ್ತಡದ ಕಾರಣಗಳು ಮತ್ತು ಪರಿಹಾರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 30 ವರ್ಷಗಳ ಬಳಿಕ ಪ್ರತಿಯೊಬ್ಬರು ತಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದರ ಅಗತ್ಯದ ಬಗ್ಗೆ ತಿಳಿಸಿದರು. ದೈನಂದಿನ ವ್ಯವಹಾರ, ಜೀವನ ಕ್ರಮ, ಆಹಾರ ಇತ್ಯಾದಿಗಳಲ್ಲಿ ನಿಯಮ ಪಾಲನೆ ಇಲ್ಲದಿರುವುದು, ಬಾಯಿ ರುಚಿಗಾಗಿ ಪೊಟ್ಟಣಗಳಲ್ಲಿ ದೊರೆಯುವ ಉಪ್ಪಿನಂಶ ಅಧಿಕವಿರುವ ಆಹಾರ ಸೇವನೆ, ಆಲಸ್ಯ ಭರಿತ ಜೀವನ, ಹೊಗೆಸೊಪ್ಪು, ಬೀಡಿ, ಸಿಗರೇಟು, ಮಧ್ಯ ಇತ್ಯಾದಿ ಅಮಲು ಸೇವನೆ ನಿಯಮಿತವಾದ ವ್ಯಾಯಾಮವಿಲ್ಲದ ವ್ಯವಸ್ಥೆ ಈ ಎಲ್ಲಾ ಕಾರಣಗಳಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದರು.
    ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿರುವ ಡಾ|| ಸರೋಜ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
      ಸಭಾ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿರುವ ಡಾ|| ಓ.ಆರ್.ಶ್ರೀರಂಗಪ್ಪ ಇವರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸುವರೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು. ಅತಿಯಾದ ಮಾನಸಿಕ ಒತ್ತಡದಿಂದಾಗಿ ರಕ್ತದೊತ್ತಡ ಏರುವುದು-ತನ್ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ ಎಂದು ವಿವರಿಸುತ್ತಾ ಸಮತೋಲನಾ ಆಹಾರ ಕ್ರಮ, ದುಶ್ಚಟ ರಹಿತವಾದ ಬದುಕು, ಶಾರೀರಿಕ ಶ್ರಮಗಳ ಜೊತೆಗೆ ಯೋಜಿತ ಜೀವನಕ್ರಮವನ್ನು ಅನುಸರಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಹಾಗೂ ನಿಯಮಿತವಾಗಿ ರಕ್ತದೊತ್ತಡ ಪರಿಶೀಲಿಸಿ ಸಮಸ್ಯೆ ಕಂಡುಬಂದಲ್ಲಿ ಅರ್ಹ ವೈದ್ಯರ ಸಲಹೆ ಪಡೆದು ಕ್ರಮಪ್ರಕಾರ ಔಷಧಿ ಸೇವನೆಯನ್ನು ಮಾಡುವುದರಿಂದ ಅಧಿಕ ರಕ್ತದೊತ್ತಡದಿಂದ ಹೃದಯ, ಮೆದುಳು ಇತ್ಯಾದಿ ಅಂಶಗಳಿಗೆ ಸಂಭವಿಸಬಹುದಾದ ಗಂಭೀರ ತೊಂದರೆಗಳನ್ನು ತಡೆಗಟ್ಟ ಬಹುದೆಂದು ಹೇಳಿದರು.
   ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಡಾ||.ರಾಮಕೃಷ್ಣರಾವ್ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ, ಡಾ||.ರುಕ್ಮಿಣಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ತಜ್ಞರು, ಡಾ||. ಕಿಶೋರ್ ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ಶ್ರೀನಿವಾಸ್ ಕಾಲೇಜ್ನ ಉಪನ್ಯಾಸಕರು ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ|| ಪಿ.ಎಸ್.ಐತಾಳ್ ಸ್ವಾಗತಿಸಿದರು. ಉಪನ್ಯಾಸಕರಾದ  ಪ್ರದೀಪ್.ಎಂ.ಡಿ. ಧನ್ಯವಾದ ಸಲ್ಲಿಸಿದರು. ಹಿರಿಯ ಮಲೇರಿಯ ಪರಿವೀಕ್ಷಕ ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.