Saturday, December 11, 2010

ಅನರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆ: ಪರಿಶೀಲಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಡಿಸೆಂಬರ್ 11: ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹ ಫಲಾನುಭವಿಗಳು ಹಾಗೂ ಮರಣಾನಂತರವೂ ಕೆಲವರ ಹೆಸರಿನಲ್ಲಿ ಮಾಸಾಶನ ಪಡೆಯುತ್ತಿರುವ ದೂರುಗಳಿರುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಡಿ.10ರಂದು ನಡೆದ ಟೆಲಿಕಾನ್ಫರೆನ್ಸಿನಲ್ಲಿ ಪ್ರಸ್ತಾಪಿಸಿದ್ದು, ಜಿಲ್ಲೆಯ ಕಂದಾಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚಿಸಿದರು.

ಅವರು ಡಿ.10 ರಂದು ನಡೆಸಿದ ಕಂದಾಯ ಅಧಿಕಾರಿಗಳ, ನಗರಸಭೆ ಮತ್ತು ಪಟ್ಟಣ ಪಂಚಾ ಯತ್ ಗಳ ಅಧಿಕಾರಿಗಳ ಸುದೀರ್ಘ ಸಭೆಯಲ್ಲಿ ಮೇಲಿನಂತೆ ಸೂಚನೆ ನೀಡಿದರು. ಸಾಮಾಜಿಕ ಭದ್ರತಾ ಯೋಜನೆ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು ಜಿಲ್ಲಾ ಖಜಾನೆಗೆ ಮಾಹಿತಿ ಒದಗಿಸಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ವಿತರಣೆ ಮಾಡಬೇಕಾದ ಸೌಲಭ್ಯಗಳನ್ನು ಸಮಯಮಿತಿಯೊಳಗೆ ಪೂರೈಸಬೇಕೆಂದು ಸೂಚಿಸಿದರು.
ಪ್ರಾಕೃತಿಕ ವಿಕೋಪ ಪರಿಹಾರ ವಿತರಣೆಯಲ್ಲಿ ವಿಳಂಬಸಲ್ಲದೆಂದ ಜಿಲ್ಲಾಧಿಕಾರಿಗಳು, ಈ ಸಂಬಂಧ ತಹಸೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಹೇಳಿದರು. ಅನಧಿಕೃತ ಧಾರ್ಮಿಕ ನಿರ್ಮಾಣ ತೆರವು ಕಾರ್ಯಾಚರಣೆಯನ್ನು ಜನವರಿ 5ರವರೆಗೆ ಮುಂದೂಡಲು ಅಧಿಕಾರಿಗಳಿಗೆ ಹೇಳಿದರು.
ಮರಳು ಸಾಗಾಣಿಕೆ ಲಾರಿಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕಾಗಿದ್ದು, ಜಿಪಿಎಸ್ ಸ್ವಿಚ್ ಆಫ್ ಆಗಿದ್ದಲ್ಲಿ ಅಂತಹ ವಾಹನಗಳ ವಿರುದ್ಧ ಮೂರು ದಿನಗಳೊಳಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರು. ಆಶ್ರಯ ವಸತಿ ಯೋಜನೆಯಡಿ ಎಲ್ಲಾ ಐದು ತಾಲೂಕುಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಜನವರಿ 15ರೊಳಗೆ ಮುಗಿಯಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಮಯಮಿತಿ ನಿಗದಿಪಡಿಸಿದರು.
ಎಲ್ಲ ತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣ ಬಗ್ಗೆ, ತಾಲೂಕು ಕಚೇರಿಗಳಲ್ಲಿ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಮತ್ತು ಸ್ಕಾನಿಂಗ್ ಮಾಡುವ ಕಾರ್ಯದಲ್ಲಾಗುತ್ತಿರುವ ಪ್ರಗತಿ ಬಗ್ಗೆ, ಒಟಿಸಿಎಸ್ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ಈಗ ನೀಡುವ ಸರ್ಟಿಫಿಕೆಟ್ ಗಳೊಂದಿಗೆ ಜನನ/ಮರಣ ಮತ್ತು ಭೂಹಿಡುವಳಿದಾರರಿಗೆ ಮತ್ತು ವಾಸ್ತವ್ಯ ಸರ್ಟಿಫಿಕೆಟ್ ಗಳನ್ನು ನೀಡುವುದನ್ನು ಆರಂಭಿಸಬೇಕೆಂದರು. ನೆಮ್ಮದಿ ಮತ್ತು ಭೂಮಿ ಸಂಬಂಧ ಇರುವ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ನುಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9000 ಪಡಿತರ ಚೀಟಿ ನೀಡಬೇಕಾಗಿದ್ದು, ಇದರಲ್ಲಿ 3000 ಬಿಪಿಎಲ್ ಕಾಡ್ರ್ ನೀಡಬೇಕಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 18ರಿಂದ 20,000 ಕಾಡ್ರ್ ಗಳಲ್ಲಿ ತಿದ್ದುಪಡಿಯಾಗಬೇಕಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಆಕಾರಬಂದ್ ಮತ್ತು ಆರ್ ಟಿಸಿಗಳನ್ನು ನೀಡುವ, ನಿವೇಶನ ಸಮೀಕ್ಷೆ ಮಾಡುವ ಕಡತಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೋಮವಾರದೊಳಗೆ ನೀಲಿ ನಕ್ಷೆ (ಆಕ್ಷನ್ ಪ್ಲಾನ್) ತಯಾರಿಸಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ದಾಖಲೆಗಳ ಶೀಘ್ರ ವಿಲೇವಾರಿಗೆ ಆಂದೋಲನ ಮಾದರಿ ಕಾರ್ಯಕ್ರಮ ರೂಪಿಸಿ ಜನರಿಗೆ ನೆರವಾಗಬೇಕೆಂದರು.
ಆರ್ ಟಿ ಸಿಗೆ 15 ರಿಂದ 10 ರೂ.ಇಳಿಕೆ:
ಆರ್ ಟಿ ಸಿ ಪ್ರತಿಗೆ ದರವನ್ನು 15 ರಿಂದ 10ರೂ.ಗಳಿಗೆ ಇಳಿಸಿದ್ದು ಜನರಿಗೆ ಇದರಿಂದ ಉಪಕಾರವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.