Saturday, December 11, 2010

ಜಿಲ್ಲಾ ನಗರಯೋಜನೆ ಕೋಶದ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಅತೃಪ್ತಿ

ಮಂಗಳೂರು,ಡಿಸೆಂಬರ್ 11: ಜಿಲ್ಲಾ ನಗರಯೋಜನೆ ಕೋಶದ ಕಾರ್ಯವೈಖರಿ ಯಿಂದಾಗಿ ಜಿಲ್ಲಾಧಿಕಾರಿಗಳು ಲೋಕ್ ಅದಾಲತ್ ನಲ್ಲಿ ನಿಲ್ಲುವಂತಾಗಿದೆ. ಇದೇ ಮಾದರಿ ಕಾರ್ಯವೈಖರಿ ಮುಂದುವರಿದರೆ ಅಧಿಕಾರಿಗಳು ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಬೇಕಾದೀತು. ಕರ್ತವ್ಯ ನಿರ್ವಹಿಸದಿದ್ದರೆ ಅಂತಹವರಿಗೆ ಸರ್ಕಾರದ ಸಂಬಳವನ್ನು ಪಡೆಯಲು ಹಕ್ಕಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಸಂಬಳ ನಿಲ್ಲಿಸಲು ತಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗಳು ಸಭೆಗಳಿಂದ ಕೆಲಸವಾಗದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಜಿಲ್ಲೆಯಲ್ಲಿ ಎಲ್ಲೂ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ನೀಡಿದ ಮಾಹಿತಿ ತಾನು ಸ್ಥಳ ಭೇಟಿಯ ಸಂದರ್ಭದಲ್ಲಿ ಸುಳ್ಳು ಎಂದು ಸಾಬೀತಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ನುಡಿದರು. ಮೂರು ವಾರದೊಳಗೆ ಮೂಡಬಿದ್ರೆ ಮತ್ತು ಬಂಟ್ವಾಳದವರು ತಮ್ಮ ಕಸವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಮೂರು ವಾರದ ಬಳಿಕ ಅಲ್ಲಿನ ಕಸ ಪಾಲಿಕೆ ವ್ಯಾಪ್ತಿಗೆ ತಂದು ಸುರಿಯಲು ಅವಕಾಶ ಮಾಡಿಕೊಡುವುದಿಲ್ಲ. ಪಾಲಿಕೆ ವ್ಯಾಪ್ತಿಯ ಡಮಪಿಂಗ್ ಯಾರ್ಡ್ ಗೆ ಎಲ್ಲ ಕಡೆಯಿಂದ ಕಸ ಬರುತ್ತಿ ರುವುದರಿಂದ ಡಂಪಿಂಗ್ ಯಾರ್ಡ್ ಅವ್ಯವಸ್ಥೆಯ ಆಗರವಾಗಿದೆ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ತಾಲೂಕು,ಪಟ್ಟಣ ಪಂಚಾಯಿತಿಗಳು ಘನತ್ಯಾಜ್ಯ ವಿಲೇವಾರಿಗೆ ಅವರವರ ವ್ಯಾಪ್ತಿಯಲ್ಲೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದ ಜಿಲ್ಲಾಧಿಕಾರಿಗಳು, ಡಿಸೆಂಬರ್ 31ರೊಳಗೆ ಸುಳ್ಯದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗಬೇಕೆಂದರು. ಮುಲ್ಕಿಯಲ್ಲಿ ಈ ಸಂಬಂಧ ಸ್ಥಳಕ್ಕೆ ನೀಡಿರುವ ನ್ಯಾಯಾಲಯ ತಡೆಯಾಜ್ನೆ ಯನ್ನು 15 ದಿನಗಳೊಳಗೆ ತೆರವು ಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದರು. ಮೂಡಬಿದ್ರೆ,ಬೆಳ್ತಂಗಡಿ ಮತ್ತು ಮುಲ್ಕಿ ವ್ಯಾಪ್ತಿಗೆ ಮನಾಪದ ಪರಿಸರ ಇಂಜಿನಿಯರ್ ಮಂಜು ಅವರು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಕ್ರಿಯಾಯೋಜನೆ ಹಾಗೂ ತ್ಯಾಜ್ಯ ನಿರ್ವಹಣೆ ಘಟಕ ಆರಂಭವಾಗು ವವರೆಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು. ಬಂಟ್ವಾಳ, ಪುತ್ತೂರು, ಸುಳ್ಯ ಉಳ್ಳಾಲಕ್ಕೆ ಇಂಜಿನಿಯರ್ ಮಧು ಅವರಿಗೆ ಹೊಣೆಯನ್ನು ವಹಿಸಲಾಗಿದೆ.