Saturday, December 18, 2010

ಪಂಚಾಯತ್ ಚುನಾವಣೆ: ಕಾನೂನು ಸುವ್ಯವಸ್ಥೆ ಪಾಲನೆ ಸಭೆ

ಮಂಗಳೂರು, ಡಿಸೆಂಬರ್ 18: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಸದಾಚಾರ ಸಂಹಿತೆ ಪಾಲಿಸಲು ಹಾಗೂ ಕಾನೂನು, ಸುವ್ಯವಸ್ಥೆ ರೂಪಿಸಲು ನೆರವಾಗುವಂತೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಮತ್ತು ಚುನಾವಣಾ ಕರ್ತವ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿಗಳ ಸಭೆ ನಡೆಯಿತು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನೀಡಿದ ಸೂಚನೆ ಯಂತೆ ಚುನಾವಣೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸವಿವರ ಚರ್ಚೆ ನಡೆಸಿದರು. ಪೊಲೀಸ್ ಮತ್ತು ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆಗಳು ಚುನಾವಣೆ ಸಂದರ್ಭದಲ್ಲಿ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡಿದರು. ಅಬಕಾರಿ ಇಲಾಖೆಯಿಂದ 24 ಗಂಟೆ ನಿಯಂತ್ರಣ ಕೊಠಡಿ, ಜಂಟಿ ತಂಡ ನಿಯೋಜನೆಗೆ ಸಹಕಾರ, ತಂಡಗಳಲ್ಲಿ ಅಬಕಾರಿ ಇಲಾಖೆಯಿಂದ ತಂಡಕ್ಕೊಬ್ಬರಂತೆ ಜನರು. ಜಿಲ್ಲೆಯ ಗಡಿಗಳೊಂದಿಗೆ ಅಬಕಾರಿ ಇಲಾಖಾಧಿಕಾರಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಸತತ ಸಂಪರ್ಕವಿರಿಸಿಕೊಂಡು ಅಪರಾಧಗಳು ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು. ಗೃಹರಕ್ಷಕ ದಳದ ಬೆಂಬಲ ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮದ್ಯ ಸಾಗಾಣಿಕೆ ತಡೆ, ಮದ್ಯದಂಗಡಿಗಳು ಸಮಯ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಲು ಅಬಕಾರಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಎಲ್ಲ ಇಲಾಖೆಯಿಂದ ತಲಾ ಒಬ್ಬರು. ಕೆ.ಸಿ. ರೋಡ್ ನಲ್ಲೇ ಚೆಕ್ ಪೋಸ್ಟ್ ಸ್ಥಾಪನೆ ಬಗ್ಗೆ ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಯಿತು. ತಲಪಾಡಿ ಚೆಕ್ ಪೋಸ್ಟ್ ಇದ್ದರೂ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ಇಲ್ಲಿ ಗಸ್ತು ತಿರುಗುವುದನ್ನು ಬಲಪಡಿಸುವಂತೆ ಸಲಹೆ ಮಾಡಿದರು.
ವಾಣಿಜ್ಯ ತೆರಿಗೆ ಇಲಾಖೆಯವರು ಸಗಟು ಖರೀದಿಯ ಮೇಲೆ ಕಣ್ಗಾವಲಿರಿಸಬೇಕು. ವ್ಯಾಪಾರಿಗಳ ಸಭೆ ಕರೆದು ಇಂತಹ ಪ್ರಕರಣಗಳೇನಾದರೂ ಬಂದ ಬಗ್ಗೆ ದಿನ ನಿತ್ಯ ವರದಿ ಮಾಡಲು ಸೂಚಿಸಬೇಕು. ಸಗಟು ಖರೀದಿಯಲ್ಲಿ ಅಕ್ರಮಗಳು ದಾಖಲಾದರೆ ವ್ಯಾಪಾರಿಗಳನ್ನೇ ಹೊಣೆಯಾಗಿಸಬೇಕೆಂದರು. ಪ್ರತಿನಿತ್ಯ ಎಲ್ಲ ಇಲಾಖೆಗಳು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆಗೆ ವರದಿಯನ್ನು ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಈಗಾ ಗಲೇ ನೀತಿ ಸಂಹಿತೆ ಅನುಷ್ಠಾ ನಾಧಿ ಕಾರಿ ಗಳ ಸಭೆ ನಡೆಸ ಲಾಗಿದ್ದು, ನಾಮ ಪತ್ರ ಸಲ್ಲಿಕೆ ಸಂದರ್ಭ ದಲ್ಲಿ, ಪ್ರಚಾರಕ್ಕೆ ವಾಹನ ಗಳಿಗೆ ಪ ರವಾನಿಗೆ ನೀಡುವ ಬಗ್ಗೆ ಯೂ ಚರ್ಚಿಸ ಲಾಯಿತು. ಪರ ವಾನಿಗೆ ಪತ್ರದ ಮೂಲ ಪ್ರತಿಯನ್ನು ವಾಹನಕ್ಕೆ ಅಂಟಿಸಿ ಕೊಂಡಿರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜನಸಂಪರ್ಕ ಸಭೆಗಳನ್ನು ಮಾಡುವ ಬಗ್ಗೆ, ಚುನಾವಣೆಯಲ್ಲಿ ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಬಳಸಬೇಕು ಎಂದರು. ಸ್ಥಳೀಯ ಪೊಲೀಸ್ ಮತ್ತು ತಹಸೀಲ್ದಾರರು ಜಂಟಿಯಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ, ಸೆಕ್ಟರ್ ಅಧಿಕಾರಿಗಳಿಗೆ ಚುನಾವಣೆಯಂದು ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡುವ ಬಗ್ಗೆ, ಹಾಗೂ ಈ ಸಂಬಂಧ ಅವರಿಗೆ ತರಬೇತಿ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.ಚುನಾವಣೆಯಲ್ಲಿ ನಿರತ ಸಿಬ್ಬಂದಿಗಳ ಯೋಗಕ್ಷೇಮಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧಿಕಾರಿ ಹಾಗೂ ತಾಲೂಕಿಗೊಬ್ಬರಂತೆ ಒಟ್ಟು 6 ಜನ ಅಧಿಕಾರಿಗಳನ್ನು ನೇಮಿಸಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವವರು ಯಾವುದೇ ಸಮಸ್ಯೆ ಎದುರಾದರೂ ಇವರನ್ನು ಸಂಪರ್ಕಿಸುವಂತೆ 6 ಅಧಿಕಾರಿಗಳನ್ನು ನೇಮಿಸಲು ಸಭೆ ನಿರ್ಧರಿಸಿತು. ಚುನಾವಣಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು, ಕರ್ತವ್ಯ ನಿರತ ಸಿಬ್ಬಂದಿಗಳು ಪೋಸ್ಟಲ್ ಬ್ಯಾಲೆಟ್ ಮುಖಾಂತರ ಮತದಾನ ಮಾಡಲು ನೆರವಾಗುವಂತೆ ಇಲಾಖೆಯ ಮುಖ್ಯಸ್ಥರು ಇಂತಹವರ ಬಗ್ಗೆ ಸಮಗ್ರ ಮಾಹಿತಿಯನ್ನು ಡಿ.22ರೊಳಗೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಚುನಾವಣಾ ಕರ್ತವ್ಯಕ್ಕಾಗಿ ಖಾಸಗಿ ವಾಹನ ಬಳಸಿಕೊಂಡ ಸಂದರ್ಭಗಳಲ್ಲಿ ಅಂತಹ ವಾಹನಗಳ ಚಾಲಕರಿಗೆ ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ವ್ಯವಸ್ಥೆ ಕಲ್ಪಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ಮುತ್ತುರಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಡಾ. ರವೀಂದ್ರನ್, ಆರ್ ಟಿ ಒ ಸೇವಾನಾಯಕ್, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಸಭೆಯಲ್ಲಿ ಪಾಲ್ಗೊಂಡಿದ್ದರು.