ವನ್ಯಜೀವಿ ವಲಯ ಸ್ವಾಧೀನ ಪಡಿಸಿ ಕೊಳ್ಳು ವುದು ಮತ್ತು ಪುನರ್ ವಸತಿ ಯೋಜ ನೆಯಡಿ ಪರ್ಯಾಯ ವ್ಯವಸ್ಥೆ ಕಲ್ಪಿ ಸುವ ಸಂಬಂಧ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುನರ್ ವಸತಿ ಯೋಜನೆಯಡಿ ಅರಣ್ಯದೊಳಗಿರುವ ಕುಟುಂಬಗಳಿಗೆ ಯೋಗ್ಯ ಮೌಲ್ಯ ನೀಡುವ ಬಗ್ಗೆ ಸವಿವರ ಚರ್ಚೆ ನಡೆಯಿತು. ಈಗಾಗಲೇ ಹೊರಬಂದ 13 ಕುಟುಂಬಗಳಿಗೆ 96.61 ಲಕ್ಷ ಪರಿಹಾರವನ್ನು ನೀಡಲಾಗಿದೆ. ಹಾಗೂ ಇವರಿಂದ 13.79 ಎಕರೆ ಖಾಸಗಿ ಭೂಮಿಯನ್ನು ಉದ್ಯಾನವನಕ್ಕೆ ನೋಂದಣಿ ಮಾಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
2010-11ನೇ ಸಾಲಿನಲ್ಲಿ ಪುನರ್ ವಸತಿ ಯೋಜನೆಗೆ ಸರ್ಕಾರ ರೂ. 250 ಲಕ್ಷ ಅನುದಾನ ಹಂಚಿಕೆ ಮಾಡಿದ್ದು, ಮೊದಲ ಕಂತಿನಲ್ಲಿ ರೂ. 62.50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ 91 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, 09-10ನೇ ಸಾಲಿನಲ್ಲಿ 12 ಕುಟುಂಬಗಳ ಹಾಗೂ 10-11ನೇ ಸಾಲಿನಲ್ಲಿ 9 ಕುಟುಂಬಗಳು ಮೌಲ್ಯಮಾಪನ ಪೂರ್ಣಗೊಂಡಿರುತ್ತದೆ. 12+1 ಕುಟುಂಬ ಉದ್ಯಾನದಿಂದ ಹೊರಬಂದಿದೆ. ಉಳಿದ 70 ಪ್ರಕರಣಗಳ ಮೌಲ್ಯಮಾಪನ ಸಲುವಾಗಿ ಅರ್ಜಿಗಳನ್ನು ತಹಸೀಲ್ದಾರ್ ಬೆಳ್ತಂಗಡಿ ಇವರಿಗೆ ಕಳುಹಿಸಿ ಕೊಡಲಾಗಿದ್ದು, ತೋಟಗಾರಿಕೆ, ಕಂದಾಯ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖಾ ಮೌಲ್ಯಮಾಪನ ಜಾರಿಯಲ್ಲಿದೆ.
ಸ್ಥಳೀಯ ಜನರ ಹಿತಾಸಕ್ತಿ ಗಮನದಲ್ಲಿರಿಸಿ ಅವರ ಪರಿಸ್ಥಿತಿಗಳನ್ನು ಸರ್ಕಾರಕ್ಕೆ ತಲುಪಿಸಿ ಅವರಿಗೆ ಅತ್ಯುತ್ತಮ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸಮಿತಿಯ ಸದಸ್ಯರಿಗೆ ಸೂಚಿಸಿದರು. ಮೌಲ್ಯಮಾಪನವನ್ನು ಶೀಘ್ರವಾಗಿ ನಡೆಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಿನನಿಗದಿಪಡಿಸಿ ಸಮನ್ವಯದಿಂದ ಮೌಲ್ಯಮಾಪನ ನಡೆಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಅರಣ್ಯದಿಂದ ಮಾನವರನ್ನು ಹೊರತರುವ ಉದ್ದೇಶದಿಂದ ರೂಪಿಸಲ್ಪಟ್ಟ ಯೋಜನೆಯಲ್ಲಿ ಪುನರ್ ವಸತಿ ಕಲ್ಪಿಸುವ ಬಗ್ಗೆಯೂ ಅಧಿಕಾರಿಗಳು ಕಾಳಜಿ ವಹಿಸಬೇಕಿದೆ ಎಂದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್, ಜಿಲ್ಲಾ ಸರ್ಜನ್ ಡಾ. ಸರೋಜ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವರಾಮೇಗೌಡ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.