Saturday, December 11, 2010

'ಪರವಾನಿಗೆ ಇಲ್ಲದೆ ವ್ಯವಹಾರಕ್ಕೆ ಅವಕಾಶವಿಲ್ಲ'

ಮಂಗಳೂರು,ಡಿಸೆಂಬರ್ 11: ಕಾನೂನುಪ್ರಕಾರ ವ್ಯಾಪಾರಕ್ಕೆ ಪರವಾನಿಗೆ ನೀಡುವುದರಿಂದ ಪಾಲಿಕೆಗೆ ಆದಾಯ ದೊರೆಯುತ್ತದೆ. ಆದರೆ ಪರವಾನಿಗೆ ಪಡೆಯದೆ ವ್ಯವಹಾರ ನಡೆಸಲು ಅವಕಾಶ ನೀಡಿ ಅಕ್ರಮಕ್ಕೆ ದಾರಿ ಮಾಡಿದರೆ ಮುಖ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕುಂಭಕರ್ಣನ ನಿದ್ದೆಬಿಟ್ಟು ಎದ್ದೇಳಿ, ಹೇಗೂ ವ್ಯವಸ್ಥೆ ನಡೆದುಕೊಂಡು ಹೋಗುತ್ತದೆ ಎಂಬ ಉದಾಸೀನ ಮನೋಭಾವವನ್ನು ಬಿಟ್ಟು, ಕಾನೂನು ಪ್ರಕಾರ ವ್ಯವಹಾರ ನಡೆಸಲು ಅನುಮತಿ ಕೇಳಿದವರಿಗೆ ಅನುಮತಿ ನೀಡಿ; ಅಲ್ಲದವರಿಗೆ ಅನುಮತಿ ನೀಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಜನವರಿ 15 ರೊಳಗೆ ಈ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಬೇಕು. ಅಕ್ರಮ ವ್ಯಾಪಾರಕ್ಕೆ ಅವಕಾಶವಿರಬಾರದು. ನಗರದೆಲ್ಲೆಡೆ ಕಂಡುಬರುವ ಹೋರ್ಡಿಂಗ್ಸ್, ಭಿತ್ತಿಪತ್ರಗಳಲ್ಲಿ ಅನುಮತಿ ಕೊಟ್ಟ ದಿನಾಂಕ, ಅಂತಿಮ ದಿನಾಂಕ ನಮೂದಾಗಿರಬೇಕು ಎಂದರು.ಮೂಡಬಿದ್ರೆಯ ಕಿರಿಯ ಆರೋಗ್ಯಾಧಿಕಾರಿ ಸಾಜಿತ್ ಅವರು ಅನಧಿಕೃತ ಗೈರುಹಾಜರಿಯನ್ನು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಅವರ ವಿರುದ್ದ ತಕ್ಷಣವೇ ವರದಿ ಕಳುಹಿಸಲು ಸೂಚಿಸಿದರಲ್ಲದೆ, ಕಠಿಣ ಕ್ರಮಕೈಗೊಳ್ಳುವುದಾಗಿಯೂ ನುಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ನಗರ ಯೋಜನ ಕೋಶದ ಯೋಜನಾ ನಿರ್ದೇಶಕ ಶ್ರೀಧರ್, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ, ಪುತ್ತೂರು ವಿಭಾಗದ ಡಾ. ಹರೀಶ್ ಕುಮಾರ್, ತಹಸೀಲ್ದಾರರಾದ ಮಂಜುನಾಥ್, ಪ್ರಮೀಳಾ ಸೇರಿದಂತೆ ಎಲ್ಲ ತಹಸೀಲ್ದಾರರು, ಮುಖ್ಯ ಅಧಿಕಾರಿಗಳು, ಮನಾಪ ಅಧಿಕಾರಿಗಳು, ಇಂಜಿನಿಯರ್ ಗಳು ಉಪಸ್ಥಿತರಿದ್ದರು.