Monday, December 27, 2010

ಕದ್ರಿ ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್,27:ನಗರದ ಆಕರ್ಷಣೀಯ ಉದ್ಯಾನವಾದ ಕದ್ರಿ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಯಾತ್ರಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಉದ್ಯಾನವನದ ಒಳಗೆ ಫಲಕಗಳನ್ನು ಹಾಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೋಟಗಾರಿಕಾ ಇಲಾಖಾಧಿಕಾರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕದ್ರಿ ಉದ್ಯಾನವನದ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಹೆದ್ದಾರಿ ಬದಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಆವರಣ ಗೋಡೆಯನ್ನು ಕಟ್ಟುತ್ತಿದ್ದು, ಈ ಕಾಮಗಾರಿಯನ್ನು ತುರ್ತಾಗಿ ಪೂರೈಸಲು ಸಂಬಂಧಪಟ್ಟ ಇಂಜಿನಿಯರ್ ಗೆ ಸೂಚಿಸಿದರು. ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉದ್ಯಾನವನದಲ್ಲಿ ಪುಟಾಣಿ ರೈಲನ್ನು ಇನ್ನು 20 ದಿನಗಳೊಳಗೆ ಚಾಲನೆಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹೇಳಿದರು. ರೈಲಿನ ಶೆಡ್ ಹಾಗೂ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಟೆಂಡರ್ ದಾರರಿಗೆ ಷರತ್ತಿನೊಂದಿಗೆ ವಹಿಸಲು ಸೂಚಿಸಿದೆ. ಉದ್ಯಾನವನದ ಹೈಮಾಸ್ಟ್ ಲೈಟನ್ನು ಮತ್ತು ಇತರ ವಿದ್ಯುತ್ ಜೋಡಣೆಗಳನ್ನು ಕೂಡಲೇ ಸರಿಪಡಿಸುವಂತೆ ಪಾಲಿಕೆ ಇಂಜಿನಿಯರ್ ಗೆ ಸೂಚಿಸಿದರು.
ಪಾರ್ಕಿನ ಇನ್ನೊಂದು ತುದಿಯಲ್ಲಿರುವ ಬೋಟ್ ಲೇಕನ್ನು ನಿರ್ವಹಿಸದಿರುವುದನ್ನು ಹಾಗೂ ತ್ಯಾಜ್ಯ ವಿಲೇ ಸಮರ್ಪಕವಾಗಿರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ತ್ಯಾಜ್ಯ ವಿಲೇವಾರಿಗೆ ಮಹಾನಗರಪಾಲಿಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಉದ್ಯಾನವನದ ಅಭಿವೃದ್ಧಿಗಿರುವ ತಾಂತ್ರಿಕ ತೊಂದರೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿರ್ದೇಶಕರು, ತೋಟಗಾರಿಕಾ ಇಲಾಖೆ ಇವರೊಂದಿಗೆ ಚರ್ಚಿಸುವುದಾಗಿ ನುಡಿದರು. ಉದ್ಯಾನವನದ ಅಭಿವೃದ್ಧಿಗೆ 16 ಕೋಟಿ ರೂ. ಯೋಜನೆಯ ಪ್ರಸ್ತಾವವಿದ್ದು, ನಗರಾಭಿವೃದ್ಧಿ ಇಲಾಖಾ ಕಾರ್ಯದಶರ್ಿಯವರಿಗೂ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
1.25 ಎಕರೆ ಅಂಬೇಡ್ಕರ್ ಭವನಕ್ಕೆ ಜಮೀನು ಕಾದಿರಿಸಲು ಸೂಚನೆ:
ಮಂಗಳೂರು ತಾಲೂಕಿನ ದೇರೇಬೈಲು ಗ್ರಾಮದ ಸರ್ವೇ ನಂಬರ್ 178/1 ರಲ್ಲಿ 2.88 ಎಕರೆ ಸರಕಾರಿ ಜಮೀನಿನ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಅವರು, ಒಂದು ಎಕರೆ ಜಮೀನನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಈಗಾಗಲೇ 0.25 ಎಕರೆ ಜಮೀನು ಭವನಕ್ಕೆ ಮಂಜೂರಾಗಿದೆ. ಮಂಗಳೂರು ತಹಸೀಲ್ದಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಭವನಕ್ಕೆ ಕನಿಷ್ಠ 1.25 ಎಕರೆ ಅಥವಾ ಅದಕ್ಕಿಂತ ಮೇಲ್ಪಟ್ಟ ಜಮೀನನ್ನು ಸ್ಥಳದಲ್ಲಿ ಸೂಚಿಸಿರುವಂತೆ ಪಶ್ಚಿಮ ದಿಕ್ಕಿನ ಮುಂದುಗಡೆ ಜಮೀನಿನಲ್ಲಿ ಕಾದಿರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ರೇಡಿಯೋ ಪೆವಿಲಿಯನ್ ಗೆ ಪ್ರಸ್ತಾಪವಿರುವ ಕಟ್ಟಡ ಜಮೀನು ಹಾಗೂ ಇದಕ್ಕೆ ಸಂಪರ್ಕ ರಸ್ತೆಗೆ ಜಮೀನು ಕಾದಿರಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉಳಿದ 0.40 ಯಿಂದ 0.50 ಎಕರೆ ಮೆಸ್ಕಾಂ ಇಲಾಖೆಗೆ ಮಂಜೂರಾತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ತಹಸೀಲ್ದಾರರಿಗೆ ಸೂಚಿಸಿದರು. ಈ ಪರಿಸರದಲ್ಲಿ 0.50 ಸೆಂಟ್ಸ್ ಜಾಗದಲ್ಲಿ ಸರ್ಕಾರಿ ವಸತಿ ಗೃಹಗಳಿವೆ. 0.10 ಸೆಂಟ್ಸ್ ಜಮೀನಿನಲ್ಲಿ ದೇವರಾಜ ಅರಸು ಸಮುದಾಯಭವನದ ಕಟ್ಟಡವಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ಮಂಜೂರಾತಿ ನೀಡಲು ಪ್ರತ್ಯೇಕವಾದ ಬೇಡಿಕೆ ಸಲ್ಲಿಸಲು ಜಿಲ್ಲಾಧಿಕಾರಿಗಳೂ ಸೂಚಿಸಿದರು.