Monday, December 27, 2010

ಅಳಿವೆ ಬಾಗಿಲಿನ ಹೂಳುತ್ತುವಿಕೆಗೆ ಕ್ರಮ

ಮಂಗಳೂರು ಡಿಸೆಂಬರ್ 27: ನೇತ್ರಾವತಿ-ಗುರುಪುರ ನದಿಗಳು ಸಮದ್ರದಲ್ಲಿ ಸೇರುವ ಅಳೆವೆ ಬಾಗಿಲಿನ ದಕ್ಷಿಣ ಬ್ರೇಕ್ ವಾಟರ್ ಹತ್ತಿರದಲ್ಲಿ ತುಂಬಿರುವ ಹೂಳನ್ನು ತೆಗೆಯುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದು ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರ ನಿರ್ದೇಶನದಂತೆ ಜಿಎಂಆರ್ ಎನರ್ಜಿ ಸಂಸ್ಥೆಯವರು ಸಿಂಧೂರಾಜ್ ಎಂಬ ಡ್ರೆಜ್ಜರನ್ನು ಕೇರಳದಿಂದ ತರಿಸಿ ಹೂಳು ತೆಗೆಯುವ ಕಾರ್ಯಾಚರಣೆಗೆ ತೊಡಗಿಸಿರುತ್ತಾರೆ. ಸಿಂದೂರಾಜ್ ಜಪಾನ್ ನಿರ್ಮಿತ ಅತ್ಯಾಧುನಿಕ ಡ್ರೆಜ್ಜರ್ ಇದಾಗಿದ್ದು, ಕೇಂದ್ರ ಸರ್ಕಾರದಿಂದ ಇದನ್ನು ಖರೀದಿಸಿದೆ. ಇದರ ವೈಶಿಷ್ಟ್ಯವೆಂದರೆ ಕಡಿಮೆ ಆಳದ ಪ್ರದೇಶದಲ್ಲಿ ಡ್ರೆಜಿಂಗ್ ಮಾಡಲು ಶಕ್ತವಾಗಿದೆ. ಇದರಲ್ಲಿ ಅಳವಡಿಸಿರುವ ಜಿಪಿಎಸ್ ವ್ಯವಸ್ಥೆಯಿಂದಾಗಿ ಡ್ರೆಜ್ ಮಾಡುತ್ತಿರುವ ಪ್ರದೇಶದ ಆಳ ತಿಳಿಯಬಹುದಾಗಿದೆ. ಡಿಸೆಂಬರ್ 24ರಂದು ಡ್ರೆಜ್ ಮಾಡಲಾದ ಸ್ಥಳವನ್ನು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳ ಮೀನುಗಾರರ ಪ್ರತಿನಿಧಿಗಳ ಜೊತೆಗೆ ಪರಿಶೀಲಿಸಲಾಗಿ ಅಲ್ಲಿ 3 ರಿಂದ 4.5 ಮೀಟರ್ ಆಳ ಇರುವುದು ಪತ್ತೆಯಾಗಿದ್ದು,, ಮೀನುಗಾರರ ಪ್ರತಿನಿಧಿಗಳು ಇನ್ನು ಸ್ವಲ್ಪ ಡ್ರೆಜಿಂಗ್ ಮಾಡಲು ವಿನಂತಿಸಿದ್ದು ಜಿಎಂಆರ್ ಎನರ್ಜಿ ಸಂಸ್ಥೆಯವರು ಇದಕ್ಕೆ ಒಪ್ಪಿರುತ್ತಾರೆ. ಈ ಬಗ್ಗೆ ಸಲಹೆಗಳೇನಾದರೂ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕಾಗಿ ಮೀನುಗಾರಿಕಾ ಉಪನಿರ್ದೇಶಕರಾದ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.