Sunday, December 5, 2010

ಎಲ್ಲ ಬಸ್ಸುಗಳಿಗೆ ಜಿಪಿಎಸ್ ಕಡ್ಡಾಯ: ದ.ಕ.ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್ 05: ಡಿಸೆಂಬರ್ 31 ರೊಳಗೆ ಜಿಲ್ಲೆಯಲ್ಲಿ ಬಸ್ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಸಲು ಎಲ್ಲ ಬಸ್ಸುಗಳು ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಯಲ್ಲಿ ಪ್ರಗತಿಯನ್ನು ಸಾಧಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಪ್ರಯಾಣಿ ಕರಿಂದ ಬಸ್ ವ್ಯವಸ್ಥೆಯ ಬಗ್ಗೆ ದೂರು ಗಳನ್ನು ಪರಿಶೀಲಿಸಲು, ಬಸ್ಸಿನವರು ರೂಟ್ ತಪ್ಪಿಸುವುದನ್ನು ನಿಯಂತ್ರಿಸಲು, ಜನರನ್ನು ಮಾರ್ಗ ಮಧ್ಯದಲ್ಲಿ ಇಳಿಸಿ ತೊಂದರೆ ಮಾಡುವುದನ್ನು ನಿವಾರಿಸಲು, ರೂಟ್ ಕ್ಯಾನ್ಸ್ ಲ್ ಮಾಡುವುದನ್ನು ಪರಿಶೀಲಿಸಲು ಹಾಗೂ ನಿಗದಿತ ಸಮಯಪಾಲನೆ ಸೇರಿದಂತೆ ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಲು ಜಿಪಿಎಸ್ ವ್ಯವಸ್ಥೆ ಅಳ ವಡಿಸಬೇಕೆಂದ ಜಿಲ್ಲಾಧಿಕಾರಿಗಳು, ಶೀಘ್ರವೇ ಆರ್ ಟಿ ಒ ಮತ್ತು ಪೊಲೀಸ್, ಬಸ್ ಮಾಲಕರು ಈ ಬಗ್ಗೆ ಸಭೆ ನಡೆಸಬೇಕೆಂದು ಹೇಳಿದರು.ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ಸಮವಸ್ತ್ರ ಧರಿಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ರಸ್ತೆ ಮಧ್ಯದಲ್ಲಿ ಜನರನ್ನು ಹತ್ತಿಸುವುದು, ಇಳಿಸುವುದು, ನಿಲ್ಲಿಸುವುದು ಕಂಡುಬಂದರೆ ಅಂತವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಡಿವೈಡರ್ ಹಾಕಲು, ರಸ್ತೆಗೆ ಝೀಬ್ರಾ ಕ್ರಾಸ್ ಹಾಕಲು, ಮಾರ್ಗ ಸೂಚಿಗಳನ್ನು ಹಾಕಲು ಸಾಕಷ್ಟು ಸಂಪನ್ಮೂಲವಿದ್ದು, ಪೊಲೀಸರ ಬಳಿ ಯೋಜನೆ ಸಿದ್ಧವಿದೆ. ಟ್ರಾಫಿಕ್ ಪೊಲೀಸ್ ಹಾಗೂ ಆರ್ ಟಿ ಒ ಜನರ ಅಭಿಪ್ರಾಯಗಳಿಗೆ ಸ್ಪಂದಿಸಿ ಈ ಎಲ್ಲ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಗ್ರಾಮಾಂತರ ಆಟೋ ರಿಕ್ಷಾ ಗಳನ್ನು ಪ್ರತ್ಯೇಕವಾಗಿ ಗುರುತಿಸಲು ಬೇರೆ ಬಣ್ಣ ಹಚ್ಚಲು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಅವರು ಅಗತ್ಯಕ್ಕೆ ಪಟ್ಟಣ ಪ್ರವೇಶಿಸಲು ಅನುಮತಿ ನೀಡಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆಟೋಗಳಿಗೆ ನಗರದಲ್ಲಿ ಹೆಚ್ಚಿನ ಆಟೋ ಸ್ಟಾಂಡ್ ಗಳನ್ನು ನಿರ್ಮಿಸುವ ಬಗ್ಗೆ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಪಡೀಲಿನಲ್ಲಿ ರೈಲ್ವೇ ಅಂಡರ್ ಬ್ರಿಡ್ಜ್ ನಿರ್ಮಿಸುವ ಬಗ್ಗೆ ಇದಕ್ಕಾಗಿ ತಲಾ ಶೇ.50 ಪಾಲು ಬಂಡವಾಳದೊಂದಿಗೆ ನಿರ್ಮಿಸಲು ಪ್ರಥಮ ಹಂತದಲ್ಲಿ ನಿರ್ಧರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.