Tuesday, December 28, 2010

ವೈಜ್ಞಾನಿಕ ವಾಗಿ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಡಿಸೆಂಬರ್ 28:ಘನತ್ಯಾಜ್ಯ ವಿಲೇವಾರಿ ಪ್ರಸಕ್ತ ಬೃಹತ್ ಸವಾಲಾಗಿದ್ದು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ; ಸಾರ್ವಜನಿಕರ ಕ್ಷೇಮವನ್ನು ಗಮನದಲ್ಲಿರಿಸಿ ಜಿಲ್ಲಾಡಳಿತ ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಂತೆ ಸುಳ್ಯ ನಗರಪಂಚಾಯತ್ ವ್ಯಾಪ್ತಿಯಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇಗೆ ಕ್ರಮ ಜರುಗಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿಗಳು, ಮಾಣಿ-ಸಂಪಾಜೆ ರಸ್ತೆ ವಿಸ್ತರಣೆ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತು ಪುತ್ತೂರು ಸಹಾಯಕ ಆಯುಕ್ತರು, ಕೆಆರ್ ಡಿಸಿಎಲ್, ಕೆಯುಡಬ್ಲ್ಯುಎಸ್,ತಹಸೀಲ್ದಾರ್ ಸುಳ್ಯ ಮತ್ತು ನಗರ ವ್ಯಾಪಾರಸ್ಥರ ಜೊತೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡರು.ಘನತ್ಯಾಜ್ಯ ವಿಲೇಗೆ ಮನಾಪದ ಪರಿಸರ ಅಭಿಯಂತರರ ನೆರವು ಪಡೆಯಲು ಸೂಚಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಗೆ ಕಟ್ಟಡ ತೆರವು ಗೊಳಿಸಿದ ಮಾಲೀಕರಿಗೆ ತೆರಿಗೆ ಪುನರ್ ಪರಿಶೀಲಿಸಲು, ಹಾಗೂ ಕಟ್ಟಡ ನವೀಕರಿಸುವಾಗ ಸೆಟ್ ಬ್ಯಾಕ್ ಬಿಡುವ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಆದರೆ ಪುನರ್ ನಿರ್ಮಾಣ ಸಂದರ್ಭದಲ್ಲಿ ಪಿಡಬ್ಲ್ಯುಡಿ ನೀತಿ ಹಾಗೂ ನಗರ ಪಂಚಾಯಿತಿ ನಿಯಮಗಳಂತೆ ಅನುಮತಿ ಪತ್ರ ಪಡೆಯಲು ಸೂಚಿಸಿದರು. ಮಾಣಿ-ಸಂಪಾಜೆ ರಸ್ತೆ ಕಾಮಗಾರಿ ನಗರದ ಮುಖ್ಯ ಪೇಟೆಯಲ್ಲಿ ಹಾದುಹೋಗುತ್ತಿದ್ದು, 30-4-2011 ರೊಳಗೆ ಮುಗಿಸಲು ನಿರ್ದೆಶಿಸಿದರು. ಅಭಿವೃದ್ಧಿಗೊಳ್ಳುತ್ತಿರುವ ಸುಳ್ಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ವಿಷಯವನ್ನು ನಗರ ಪಂಚಾಯತ್ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಒಳಚರಂಡಿ, ನೀರಿನ ಪೈಪ್ ಲೈನ್ ಹಾಕುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. 178 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಮೆಸ್ಕಾಂನವರಿಗೆ ಎಸ್ಟಿಮೇಷನ್ ನೀಡಲು ಹಾಗೂ ಪರಿಶೀಲಿಸಿ ಕ್ರಮಕೈಗೊಳ್ಳಲು ಇ ಇ ಕೆ ಆರ್ ಡಿಸಿಎಲ್ ಅವರಿಗೆ ಸೂಚಿಸಿದರು.