Monday, December 6, 2010

ರಾಜ್ಯಕ್ಕೆ ಶೀಘ್ರದಲ್ಲೇ ನೂತನ ಅರಣ್ಯ ನೀತಿ: ಸಚಿವ ವಿಜಯ ಶಂಕರ್

ಮಂಗಳೂರು, ಡಿ.06: ರಾಜ್ಯದಲ್ಲಿ ಶೀಘ್ರದಲ್ಲೇ ನೂತನ ಅರಣ್ಯ ನೀತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವ ವಿಜಯ ಶಂಕರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಉದ್ದೇಶಿತ ಅರಣ್ಯ ನೀತಿಯಲ್ಲಿ ಅರಣ್ಯ ಭೂಮಿಯಲ್ಲಿ ವಾಸಿಸುವ ಜನರಿಗೆ ಸಂಬಂಧಿಸಿ ದಂತೆ ಹಾಗೂ ಪರಿಸರಸ್ನೇಹಿ ಕಾಡು ಬೆಳೆಸುವ ಬಗ್ಗೆ, ಪರಿಸರ ಮಾಲಿನ್ಯ ತಡೆ ಯುವ ಕ್ರಮಗಳಿಗೆ ಸಂಬಂಧಿಸಿ ದಂತೆ ನೀತಿ ರೂಪಿಸ ಲಾಗುವುದು.
ಅರಣ್ಯ ಭೂಮಿ ಯನ್ನು ಬೇರೆ ಉದ್ದೇಶಕ್ಕೆ ಬಳಸಿ ಕೊಂಡರೆ ಪರ್ಯಾಯವಾಗಿ ಅಷ್ಟೇ ಭೂಮಿ ಯನ್ನು ಇಲಾಖೆಗೆ ಒದಗಿಸಬೇಕು. ಪರಿಸರ ಸಮತೋ ಲನಕ್ಕೆ ಶೇ. 33 ಕಾಡು ಅಗತ್ಯ ಇದೆ. ಪ್ರಸಕ್ತ ರಾಜ್ಯದಲ್ಲಿ ಶೇ. 23 ಭೂ ಪ್ರದೇಶದಲ್ಲಿ ಕಾಡು ಇದೆ. ಈ ಹಿನ್ನೆಲೆ ಯಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿ ದಂತೆ ಕೆಲವು ನೀತಿ ರೂಪಿಸಬೇಕಾಗಿದೆ. ಈ ಬಗ್ಗೆ ಕರಡು ನೀತಿ ರಚಿಸಿ ಸಾರ್ವಜನಿಕರ ಆಕ್ಷೇಪಣೆಯನ್ನು ಸ್ವೀಕರಿಸ ಲಾಗುವುದು ಎಂದು ಸಚಿವರು ತಿಳಿಸಿದರು.
ಅಕ್ರಮ ಗಣಿಗಾರಿಕೆಗೆ ತಡೆ:
ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಗಣಿ ಗಾರಿಕೆಗೂ ಅವಕಾಶ ನೀಡಲಾಗುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಅರಣ್ಯ ರಕ್ಷಣೆಗೆ ಪೂರಕವಾಗಿ ಅರಣ್ಯ ರಕ್ಷಕರ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. 800 ಅರಣ್ಯ ರಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಸ್ಥಳೀಯರನ್ನು ಅರಣ್ಯ ಇಲಾಖೆಯ ಕೆಲಸದಲ್ಲಿ ನೇಮಿಸಿಕೊಳ್ಳುವ ಚಿಂತನೆ ಸರಕಾರದ ಮುಂದಿದೆ ಎಂದು ಸಚಿವ ವಿಜಯಶಂಕರ್ ತಿಳಿಸಿದರು.
`ಹಸಿರು ಹೊನ್ನು' ಯೋಜನೆ:
ರಾಜ್ಯದಲ್ಲಿ ಬಯೋ ಡೀಸೆಲ್ ಮೊದಲಾದ ಜೈವಿಕ ಇಂಧನ ಉತ್ಪತ್ತಿಗೆ ಪೂರಕವಾದ ಮರಗಳು, ಆಯುರ್ವೇದ ಗಿಡ ಮೂಲಿಕೆಗಳನ್ನು ಬೆಳೆಯುವ `ಹಸಿರು ಹೊನ್ನು' ಯೋಜನೆ ಆರಂಭಿಸಲಾಗಿದೆ. ದೇವವನ ಮಾದರಿಯ ವನಗಳನ್ನು ಬೆಳೆಸಲು ಸರಕಾರ ಪ್ರೋತ್ಸಾಹ ನೀಡುತ್ತಿದೆ. ದೇವವನ ಪ್ರದೇಶಗಳಲ್ಲಿ ನರ್ಸರಿಯನ್ನು ನಿರ್ಮಿಸಿ ಜನರಿಗೆ ಗಿಡಗಳನ್ನು ಬೆಳೆಸಲು ಪೂರಕ ವಾತಾವರಣ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವಿಜಯ ಶಂಕರ್ ತಿಳಿಸಿದರು. ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮರಗಳನ್ನು ಕಟಾವು ನಡೆಸುವ ಸಂದರ್ಭದಲ್ಲಿ ಪರ್ಯಾಯವಾಗಿ ಸಾಲುಮರ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಹಸಿರು ಹೊನ್ನು ಯೋಜನೆಗೆ ಸಂಬಂಧಿಸಿದಂತೆ ಆಯ್ದ ಜಿಲ್ಲೆಗಳ ಜನ ಪ್ರತಿನಿಧಿಗಳನ್ನು ತಜ್ಞರೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ, ವನ್ಯಜೀವಿಗಳ ಬಗ್ಗೆ ಪಟ್ಟಿ ತಯಾರಿಸಿ ಸಂರಕ್ಷಣೆಗೆ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೈಗಾರಿಕೆಗೆ 400 ಎಕರೆ ಭೂಮಿ ಸ್ವಾಧೀನ:
ಚೇಳೂರು, ಬಾಳೆಪುಣಿ, ಇರಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಪ್ರದೇಶ ನಿರ್ಮಿಸಲು ಈಗಾಗಲೇ 400 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 176.13 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಾಕಿ ಉಳಿದಿದೆ. ನಂದಿಕೂರು ಪ್ರದೇಶದಲ್ಲಿ 110 ಎಕರೆ ಜಮೀನು ವಶಪಡಿಸಿ ಕೊಳ್ಳಲಾಗಿದೆ. ಈ ಪ್ರದೇಶದ ಜನರ ಬೇಡಿಕೆಯಂತೆ ಶೇ. 50ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು, ಅಧಿಕಾರಿಗಳ ನ್ನೊಳಗೊಂಡ ಸಮಿತಿ ರಚಿಸಲಾಗುವುದು. ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ಮನವಿ ಕೇಂದ್ರ ಸರಕಾರ ಕರಾವಳಿಯ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನಿರಾಕರಿಸುತ್ತಿದೆ. ಈ ನೀತಿಯನ್ನು ಮರು ಪರಿಶೀಲಿಸಬೇಕು. ಪರಿಸರ ಸ್ನೇಹಿ ಸಣ್ಣ ಕೈಗಾರಿಕೆಗಳಿಗೆ ಕರಾವಳಿ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಲು ಕೇಂದ್ರ ಸರಕಾರದ ಪರಿಸರ ನೀತಿ ಮರು ಪರಿಶೀಲನೆಗೆ ರಾಜ್ಯ ಸರಕಾರದಿಂದ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯೋಗೀಶ್ ಭಟ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಹಿರಿಯ ಅರಣ್ಯಧಿಕಾರಿಗಳು ಅವರು ಉಪಸ್ಥಿತರಿದ್ದರು.