Thursday, December 23, 2010

'ಕಡಲತೀರ ಅಭಿವೃದ್ಧಿಗೆ ಸಮಯಮಿತಿ ನಿಗದಿ'

ಮಂಗಳೂರು ಡಿಸೆಂಬರ್ 23:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನೀಡಿರುವ 202.83 ಲಕ್ಷ ರೂ.ಗಳಲ್ಲಿ ಪಣಂಬೂರು ಬೀಚ್, ತಣ್ಣೀರು ಬಾವಿ ಕಡಲ ತೀರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಪರಿಶೀಲಿಸಿದರು.

ಪಣಂಬೂ ರಿನಲ್ಲಿ ಬೀಚ್ ಅಭಿವೃದ್ಧಿಗೆ ಇಂಟರ್ ಲಾಕ್ ವ್ಯವಸ್ಥೆಗೆ 44 ಲಕ್ಷ ರೂ. ವೆಚ್ವ ಮಾಡುವ ಬದಲಿಗೆ ಡಾಂಬರಿ ಕರಣ ಮಾಡಿ ಇತರೆ ಅಭಿವೃದ್ಧಿ ಕೈಗೊಂಡಿದ್ದರೆ ಜನರಿಗೆ ಉಪಕಾರವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು. ಅಭಿವೃದ್ಧಿಯ ಬಳಿಕ ನಿರ್ವಹಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಎನ್ ಎಂ ಪಿ ಟಿ ಕಾರ್ಯಕಾರಿ ಅಭಿಯಂತರರಿಗೆ ಸೂಚಿಸಿದರು. 3.25 ಲಕ್ಷ ರೂ.ಗಳಲ್ಲಿ ಅಳವಡಿಸಿದ ಹೈಮಾಸ್ಟ್ ಲೈಟ್ ಗೆ ವಿದ್ಯುತ್ ಸಂಪರ್ಕ ವಿಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು. ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಲು ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
ಪಣಂಬೂರು ಕಡಲತೀರದಲ್ಲಿ ಪಾತ್ ವೇ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಗಾಡ್ರ್ ನ್, ಲೈಟಿಂಗ್, ರಿಕ್ರಿಯೇಷನ್, ಪೆನ್ ಸಿಂಗ್, ನೀರು ಪೂರೈಕೆ, ಪಾರ್ಕಿಂಗ್, ವಿದ್ಯುತ್ ಸಂಪರ್ಕ ಕಾಮಗಾರಿಗೆ ನಿರ್ಮಿತಿ ಕೇಂದ್ರಕ್ಕೆ ಜನವರಿ 2010 ರಂದೇ 76.80 ಲಕ್ಷ ಆಡಳಿತಾತ್ಮಕ ಮಂಜೂರಾತಿಯಿದ್ದು, ಪ್ರಥಮ ಹಂತದಲ್ಲಿ 22 ಲಕ್ಷ ರೂ. ಮಂಜೂರು ಮಾಡಿದೆ. ಆದರೆ ನಿರ್ಮಿತಿ ಕೇಂದ್ರದವರು ಈ ಕಾಮಗಾರಿ ಬಗ್ಗೆ ಆಲಸ್ಯ ವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು 3 ದಿನಗಳೊಳಗೆ ವರದಿ ಹಾಜರು ಪಡಿಸಲು ನಿರ್ಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಬೀಚ್ ನಲ್ಲಿ ಪಾತ್ ವೇಯನ್ನು ಇಂಟರ್ ಲಾಕ್ ಮೂಲಕ ಮಾಡಿರುವುದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಬೀಚ್ ನಿರ್ವಹಣೆ ವಹಿಸಿರುವ ಯತೀಶ್ ಬೈಕಂಪಾಡಿಯವರಿಗೆ ಸೂಚಿಸಿದರು.
ತಣ್ಣೀರು ಬಾವಿ ಕಡಲ ತೀರ ಅಭಿವೃದ್ಧಿಗೆ 76.80 ಲಕ್ಷ ರೂ. ಅನುಮೋದನೆಯಾಗಿದ್ದು, ಕಾಮಗಾರಿ ಅನುಷ್ಠಾನಕ್ಕೆ ನಿರ್ಮಿತಿ ಕೇಂದ್ರಕ್ಕೆ 22 ಲಕ್ಷ ರೂ. ನೀಡಲಾಗಿದೆ. ಇಲ್ಲೂ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಬಗ್ಗೆ ಸವಿವರ ಕ್ರಿಯಾಯೋಜನೆ ತಯಾರಿಸಿ, ಪ್ರತೀ ಹಂತದ ಕಾಮಗಾರಿ ಬಗ್ಗೆ ವರದಿ ನೀಡಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ತೂಗು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಕ್ಷಣ ಅನುಷ್ಠಾನಕ್ಕೆ ಸೂಚಿಸಿದರು. ಈ ಪ್ರದೇಶ ವ್ಯಾಪ್ತಿಯಲ್ಲೇ ಪ್ರಸ್ತಾವಿತ ಗಾಲ್ಫ್ ಕೋಸ್ರ್ ಪ್ರದೇಶಕ್ಕೆ 162 ಎಕರೆ ಪ್ರದೇಶ ಕಾದಿರಿಸಲಾಗಿದ್ದು, ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆ ಹೆಸರಿಗೆ ಆರ್ ಟಿ ಸಿ ಯಲ್ಲಿ ನಮೂದಿಸಲು ತಹಸೀಲ್ದಾರರಿಗೆ ಸೂಚಿಸಿದರು.