Thursday, December 16, 2010

ದಕ್ಷಿಣ ಕನ್ನಡ ಜಿಲ್ಲೆ : 1027 ಮತಗಟ್ಟೆಗಳು

ಮಂಗಳೂರು,ಡಿಸೆಂಬರ್,16: ರಾಜ್ಯದಲ್ಲಿ ಈ ಬಾರಿ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿ ವಿದ್ಯುನ್ಮಾನ ಮತಯಂತ್ರ ಬಳಕೆಯಾಗಲಿದೆ. ಇದರಿಂದ ಫಲಿತಾಂಶ ತ್ವರಿತವಾಗಿ ಲಭಿಸಲಿದೆ. ಮಾತ್ರವಲ್ಲ ಅಸಿಂಧು ಮತದಾನ ಕಾಲಂ ಮಾಯವಾಗಲಿದೆ.
ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೆಗಳು ನಡೆಯಲು ಅನುಕೂಲ ವಾಗು ವಂತೆ ಜಿಲ್ಲಾಡಳಿತದ ನೆರವಿ ನೊಂದಿಗೆ ಚುನಾವಣಾ ಆಯೋಗ ಸಕಲ ಸಿದ್ದತೆ ಗಳನ್ನು ಮಾಡುತ್ತಿದೆ. ಸುಮಾರು 3000 ಮತಯಂತ್ರಗಳು ಬಳಕೆಯಾಗಲಿವೆ. ಜಿಲ್ಲೆಯಲ್ಲಿ ನ.10ಕ್ಕೆ ಅನ್ವಯಿಸುವಂತೆ 9,34,143ಮತದಾರರಿದ್ದಾರೆ. ಈ ಪೈಕಿ 4,69,005ಮತದಾರರು ಮಹಿಳೆಯರು. 1027 ಮತಗಟ್ಟೆಗಳಿವೆ. 174 ಅತೀಸೂಕ್ಷ್ಮ ಮತ್ತು 233 ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.
ವೆಚ್ಚ ಮಿತಿ: ಜಿಲ್ಲಾ ಪಂಚಾಯತ್ ಗೆ ಸ್ಪರ್ಧಿಸುವವರು ರೂ.ಒಂದು ಲಕ್ಷ ಹಾಗೂ ತಾಲೂಕು ಪಂಚಾಯತ್ ಗೆ ಸ್ಪರ್ಧಿಸುವವರು ರೂ.50,000 ವೆಚ್ಚ ಮಾಡಬಹುದಾಗಿದೆ. ಅಭ್ಯರ್ಥಿಗಳು ಚುನಾವಣಾಧಿಕಾರಿ ಹಾಗೂ ಚುನಾವಣಾ ಲೆಕ್ಕಾಧಿಕಾರಿಯವರಿಗೆ ಲೆಕ್ಕಪತ್ರಗಳನ್ನು ಒಪ್ಪಿಸಬೇಕಾಗುತ್ತದೆ. ಫಲಿತಾಂಶ ಪ್ರಕಟವಾಗಿ 30 ದಿನಗಳೊಳಗೆ ವಿವರವನ್ನು ಸಲ್ಲಿಸಬೇಕು.
ವೀಕ್ಷಕರು: ಮುಕ್ತ ಹಾಗೂ ಶಾಂತಿಯುತ ಚುನಾವಣೆಗಾಗಿ ಜಿಲ್ಲೆಗೆ ಇಬ್ಬರು ವೀಕ್ಷಕರನ್ನು ನೇಮಿಸಲಾಗಿದೆ. ದ.ಕ.ಜಿಲ್ಲಾ ಅರಣ್ಯ ವ್ಯವಸ್ಥಾಪನಾಧಿಕಾರಿ ಕೆ.ಟಿ.ಕಾವೇರಿಯಪ್ಪ ಹಾಗೂ ಮೈಸೂರಿನ ಆಡಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ಇಕ್ಬಾಲ್ ಹುಸೇನ್ ಕ್ರಮವಾಗಿ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೆ ವೀಕ್ಷಕರಾಗಿದ್ದಾರೆ.
ಸಿಬಂದಿ: ಜಿಲ್ಲೆಯಲ್ಲಿ ಚುನಾವಣೆಗಾಗಿ 6779 ಸಿಬ್ಬಂದಿಗಳ ಆವಶ್ಯಕತೆಯಿದೆ. ಇದರಲ್ಲಿ ಶೇ.10 ಕಾಯ್ದಿಟ್ಟ ಸಿಬ್ಬಂದಿಗಳಾಗಿದ್ದಾರೆ. 1130 ಅಧ್ಯಕ್ಷಾಧಿಕಾರಿ, 4519 ಮತಗಟ್ಟೆ ಅಧಿಕಾರಿ ಹಾಗೂ 1130 ಗ್ರೂಪ್ ಡಿ ಸಿಬ್ಬಂದಿ ಒಟ್ಟು ಸಿಬ್ಬಂದಿಗಳಲ್ಲಿ ಒಳಗೊಂಡಿದ್ದಾರೆ.
ಮತ ಎಣಿಕೆ: ಜನವರಿ 4 ರಂದು ಮತ ಎಣಿಕೆ ಕಾರ್ಯ ಆಯಾ ತಾಲೂಕಿನಲ್ಲಿ ಗುರುತಿಸಲಾದ ಕೇಂದ್ರಗಳಲ್ಲಿ ನಡೆಯಲಿದೆ. ಮಂಗಳೂರಿನ ರೊಸಾರಿಯೋ ಸಂಯುಕ್ತ ಪದವಿಪೂರ್ವ ಕಾಲೇಜು, ಬಂಟ್ವಾಳ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಉಜಿರೆಯ ಎಸ್ ಡಿ ಎಂ ಕಾಲೇಜು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಹಾಗೂ ಸುಳ್ಯದ ಎನ್ಎಂಸಿ ಮತ ಎಣಿಕಾ ಕೇಂದ್ರಗಳಾಗಿವೆ. 5 ತಾಲೂಕುಗಳಿಗೆ 104 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 10 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿ ಇರುತ್ತಾರೆ.