Monday, December 13, 2010

ಜಿಲ್ಲಾ ರಂಗಮಂದಿರ ಸಭೆ

ಮಂಗಳೂರು, ಡಿಸೆಂಬರ್ 13: ನಗರದ ಬೋಂದೆಲ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ರಂಗಮಂದಿರ ನಿರ್ಮಾಣಕ್ಕೆ ಜಾಗ ಸಮೀಕ್ಷೆ ಮಾಡಿಸಿ ಲೋಕೋಪಯೋಗಿ ಇಲಾಖೆಯಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚಿಸಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಂಗಮಂದಿರ ನಿರ್ಮಾಣ ಸಂಬಂಧ ನಡೆಸಿದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಯೋಜನೆಯನ್ನು ರೂಪಿಸುವಾಗ ವಾಸ್ತವ ಸ್ಥಿತಿಯನ್ನು ಗಮನದಲ್ಲಿರಿಸಿ ರೂಪಿಸಬೇಕು. ಅವಾಸ್ತವಿಕ ಯೋಜನೆಗಳಿಂದ ಅನುಷ್ಠಾನ ಕಾಮಗಾರಿ ವಿಳಂಬವಾಗುವುದಕ್ಕೆ ನಮ್ಮ ಜಿಲ್ಲೆಯ ರಂಗಮಂದಿರ ಸಾಕ್ಷಿ. ಅತೀ ಕಡಿಮೆ ಜಾಗದಲ್ಲಿ ಅತ್ಯುತ್ತಮ ರಂಗಮಂದಿರ ನಿರ್ಮಾಣ ಸಾಧ್ಯ ಎಂಬುದಕ್ಕೆ ಗದಗ, ಗುಲ್ಬರ್ಗಾ ಸಾಕ್ಷಿ. ಮುಖ್ಯಮಂತ್ರಿಗಳು ಶಿಲಾನ್ಯಾಸ ಮಾಡಿದ ಜಾಗ ಬೊಂದೆಲ್ ನಲ್ಲಿ ಭವ್ಯ ರಂಗಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಪ್ರಥಮ ಹಂತದಲ್ಲಿ ಜಾಗವನ್ನು ಲೋಕೋಪಯೋಗಿ ಇಲಾಖೆಯಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಕೊಳ್ಳಿ ಎಂದು ತಹಸೀಲ್ದಾರ್ ಮಂಜುನಾಥ್ ಅವರಿಗೆ ಸೂಚಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಮಾರ್ಗದರ್ಶನ ನೀಡಿದರು. ಜಮೀನು ನಕ್ಷೆಯ ಬಳಿಕ ತಕ್ಷಣವೇ ಡಿಸೈನ್ ಸ್ಕೆಚ್ ತಯಾರಿಸಲು ಸಿದ್ಥತೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಸಂಬಂಧ ಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿಯ ಹಿರಿಯ ಸದಸ್ಯರಾದ ಏರ್ಯ ಲಕ್ಷ್ಮೀನಾರಾಯಣ, ನಾ ದಾಮೋದರ ಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಬ್ದುಲ್ ರಹಿಮಾನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರು ಉಪಸ್ಥಿತರಿದ್ದರು.