Thursday, January 31, 2013

ಶೌಚಾಲಯ ಕಾಮಗಾರಿ ಫೆಬ್ರವರಿ ತಿಂಗಳ ಅಂತ್ಯಕ್ಕೆ ಮುಗಿಸಿ: ಕೊರಗಪ್ಪ ನಾಯಕ್

ಮಂಗಳೂರು, ಜನವರಿ.31: ಸ್ವಚ್ಚತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದ್ದರೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಹುತೇಕ ಗ್ರಾಮಗಳಿನ್ನೂ ಸಂಪೂರ್ಣ ಶೌಚಾಲಯ ಹೊಂದಿರುವ ಗ್ರಾಮ ಎಂಬುದಾಗಿ ಘೋಷಣೆಯಾಗಿಲ್ಲ  ಎಂಬ ಅಸಮಾಧಾನ ಇಂದು ದ.ಕ. ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳಿಂದ ವ್ಯಕ್ತವಾಯಿತು.
ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿಂದು ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯಕ್ ಹಾಗೂ ಕೆಲ ಸದಸ್ಯರು ಈ ಬಗ್ಗೆ ಆಕ್ಷೇಪಿಸಿದರು.
ಮಂಗಳೂರು ತಾಲೂಕಿನಲ್ಲಿ 999, ಬಂಟ್ವಾಳದಲ್ಲಿ 954, ಪುತ್ತೂರು ತಾಲೂಕಿನಲ್ಲಿ 780, ಸುಳ್ಯದಲ್ಲಿ 982, ಬೆಳ್ತಂಗಡಿಯಲ್ಲಿ 1530 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾಮಗಾರಿ ಬಾಕಿ ಇದ್ದು, 2012ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಿಂದಿನ ಯೋಜನಾ ಸಮಿತಿ ಸಭೆಯಲ್ಲಿ ಭರವಸೆ ನೀಡಿದ್ದರು. ಹಾಗಿದ್ದರೂ ತಾಲೂಕು ಪಂಚಾಯತ್ ವ್ಯಾಪ್ತಿಗಳಲ್ಲಿ ಕೆಲ ಕಾಮಗಾರಿಗಳು ಮಾತ್ರವೇ ಪೂರ್ಣಗೊಂಡಿವೆ. ಪಿಡಿಒಗಳು ಶೌಚಾಲಯ ಬಾಕಿ ಆದಲ್ಲಿ ಈವರೆಗೂ ಭೇಟಿ ನೀಡಿಲ್ಲ. ಅಧಿಕಾರಿ ವರ್ಗದವರ ಉದಾಸೀನತೆಯಿಂದ ಕಾಮಗಾರಿ ಪೂರ್ಣ ಆಗಿಲ್ಲ. ಕೆಲವೆಡೆ ಅನುದಾನ ನೀಡಲಾಗಿಲ್ಲ ಎಂದು ಅಧ್ಯಕ್ಷ ಕೊರಗಪ್ಪ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಶೌಚಾಲಯ ನಿರ್ಮಾಣ ಯೋಜನೆ ಐದು ವರ್ಷಗಳಿಂದ ನಡೆಯುತ್ತಿರುವ ಅಭಿಯಾನವಾಗಿದ್ದು, ಇನ್ನೂ ಜಿಲ್ಲೆಯ ಯಾವುದೇ ಗ್ರಾಮ ಸಂಪೂರ್ಣ ಶೌಚಾಲಯ ಹೊಂದಿದ ಗ್ರಾಮ ಎಂದು ಘೋಷಣೆಗೆ ಒಳಪಡದಿರುವುದು ವಿಷಾದನೀಯ ಎಂದು ಸದಸ್ಯ ಕೇಶವ ಆಕ್ಷೇಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಫೆಬ್ರವರಿ ಅಂತ್ಯದೊಳಗೆ ಜಿಲ್ಲೆಯಾದ್ಯಂತ ಬಾಕಿ ಇರುವ ಶೌಚಾಲಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲ ಶಾಲೆಗಳಿಗೆ ಆರ್ಟಿಸಿ ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಆರ್ಟಿಸಿ ಬಗ್ಗೆ ತಹಶೀಲ್ದಾರ್ಗಳ ಮೂಲಕ ಶಾಲಾವಾರು ಪಟ್ಟಿಯನ್ನು ತಯಾರಿಸಿ, ಸಮಸ್ಯೆ ಬಗೆಹರಿಸಲು ಆಂದೋಲನ ರೂಪದಲ್ಲಿ ಕ್ರಮ ಕೈಗೊಳ್ಳುವಂತೆ ಸಿಇಒ ಡಾ. ವಿಜಯಪ್ರಕಾಶ್ ಸಭೆಯಲ್ಲಿ ಸೂಚಿಸಿದರು. 
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಶೌಚಾಲಯ ಸ್ವಚ್ಛತೆ ಕುರಿತಂತೆ ನಡೆದ ಚರ್ಚೆಯ ವೇಳೆ, ಆರೋಗ್ಯ ಇಲಾಖೆಯ ಕಚೇರಿಗಳಲ್ಲಿ ಬಹಳ ಕಡೆಗಳಲ್ಲಿ ಶೌಚಾಲಯಗಳಲ್ಲಿ ಸಾಮಾನುಗಳನ್ನು ತುಂಬಿಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಾಧಿಕಾರಿಗೆ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯಕ್ ಸೂಚನೆ ನೀಡಿದರು.
ಉಳಿದಂತೆ ಸಭೆಯಲ್ಲಿ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಆರು ಯೋಜನೆಗಳಿಗೆ ಸಂಬಂಧಿಸಿ ಪ್ರಾಥಮಿಕ ಹಂತದ ಸರ್ವೇ ಕಾರ್ಯ ಶೀಘ್ರವೇ ಪೂರ್ಣಗೊಳಿಸಿ ಯೋಜನೆಗೆ ಚಾಲನೆ ನೀಡಲು ಮುಂದಾಗುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಯೋಜನಾ ಸಮಿತಿಗೆ ಆರು ಲಕ್ಷ ರೂ. ಅನುದಾನ ಬರುತ್ತಿದ್ದು, ಅದರಲ್ಲಿ ಮೂರು ಲಕ್ಷ ರೂ.ಗಳನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಅವಕಾಶವಿದೆ ಎಂದು ಮುಖ್ಯ ಯೋಜನಾ ಅಧಿಕಾರಿ ಅಬ್ದುಲ್ ನಝೀರ್ ತಿಳಿಸಿದರು.