Monday, January 7, 2013

ಜಿಲ್ಲೆಯಲ್ಲಿ ಒಂದೂ ಮಗು ಸಹ ಪೋಲೀಯೋ ಹನಿ ಲಸಿಕೆಯಿಂದ ವಂಚಿತವಾಗಬಾರದು- ಎನ್.ಪ್ರಕಾಶ್

ಮಂಗಳೂರು,ಜನವರಿ.07:ಮಹಾಮಾರಿ ಪೋಲೀಯೋದಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಹಾಗೂ ಭಾರತವನ್ನು ಪೋಲೀಯೋ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಬ್ಬ ಮಗುವೂ ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸ್ವ ಸೇವಾ  ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
      ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವೀ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಆರ್.ಸಿ.ಹೆಚ್. ಅಧಿಕಾರಿ ಡಾ.ರುಕ್ಮಿಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈ ವರ್ಷ 1,63,860 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಇವರಲ್ಲಿ1,12,768 ಮಕ್ಕಳು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ 51,092 ಮಕ್ಕಳು ನಗರ ಪ್ರದೇಶಗಳಲ್ಲಿದ್ದಾರೆ ಎಂದರು.  20-1-13 ರಂದು 921 ಬೂತ್ಗಳಲ್ಲಿ ಪಲ್ಸ್ ಪೊಲಿಯೋ ಹನಿ ನೀಡಲಾಗುವುದು.21-1-13 ರಿಂದ 24-1-13  ವರೆಗೆ ಒಟ್ಟು 3,87,837 ಮನೆಗಳಿಗೆ ಮನೆಮನೆ ಭೇಟಿ ನೀಡಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಪೊಲಿಯೋ ಲಸಿಕೆಯನ್ನು ನೀಡಲಿದ್ದಾರೆ. ಇವರಲ್ಲಿ 2,51,021 ಗ್ರಾಮೀಣ ಹಾಗೂ 1,36,816 ನಗರ ಪ್ರದೇಶದ ಮನೆಗಳಾಗಿವೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀ ರಂಗಪ್ಪ ಅವರು ಮಾತನಾಡಿ ಕಳೆದ 22 ತಿಂಗಳಿಂದ ಭಾರತದಲ್ಲಿ ಪೊಲಿಯೋ ಪ್ರಕರಣಗಳು ಕಂಡು ಬಂದಿಲ್ಲ.ಆದರೆ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ,ಅಫಘಾನಿಸ್ತಾನ ಹಾಗೂ ನೈಜೀರಿಯಾ ದೇಶಗಳಲ್ಲಿ ಈ ರೋಗ ಇನ್ನೂ ಇರುವುದರಿಂದ ನಾವು ಎಚ್ಚರಿಕೆಯಿಂದಿರಬೇಕೆಂದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಸತೀಶ್ಚಂದ್ರ ಮಾತನಾಡಿ 1988 ರಲ್ಲಿ ವಿಶ್ವದಲ್ಲಿ33.50 ಲಕ್ಷ ಪೊಲೀಯೋ ಪ್ರಕರಣಗಳು ಕಂಡು ಬಂದಿದ್ದರೆ 2010 ರಲ್ಲಿ ಇದು 1.20 ಲಕ್ಷಕ್ಕೆ ಇಳಿಯಿತು. 1999ರಲ್ಲಿ ದ.ಕ.ಜಿಲ್ಲೆಯಲ್ಲಿ ಕೊನೆಯ ಪೊಲಿಯೋ ಪ್ರಕರಣ  ಪತ್ತೆಯಾಗಿದ್ದನ್ನು ಬಿಟ್ಟರೆ ಇಲ್ಲಿಯ ತನಕ ಕಂಡುಬಂದಿಲ್ಲ ಎಂದರು.  ಸಭೆಯಲ್ಲಿ ಎಲ್ಲಾ ತಾಲೂಕುಗಳ ಶಿಶುಯ ಅಭಿವೃದ್ಧಿ ಯೋಜನಾಧಿಕಾರಿಗಳು,ಕಾರ್ಯ ನಿರ್ವಹಣಾಧಿಕಾರಿಗಳು,ನಗರಪಾಲಿಕೆ ಜಂಟಿ ಆಯುಕ್ತರು ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಜ್ಯೋತಿ ಸ್ವಾಗತಿಸಿದರು. ಪಾಪೇ ಗೌಡ ವಂದಿಸಿದರು.