Thursday, January 31, 2013

ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಮನೆಮನೆ ದಾಳಿ-ಕಾರ್ಮಿಕ ಆಯುಕ್ತರು

ಮಂಗಳೂರು, ಜನವರಿ. 31:-ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪತ್ತೆ ಹಚ್ಚಿ ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ಮಾಡಿದ್ದಾಗ್ಯೂ ಕೆಲವೆಡೆ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸಲು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಕ್ಕಳ ಮಿತ್ರರನ್ನು ನೇಮಿಸಿ ಇಲಾಖೆ ತರಬೇತಿ ನೀಡುತ್ತಿದೆಯೆಂದು ಕಾರ್ಮಿಕ ಆಯುಕ್ತ ಡಿ.ಜೆ.ನಾಗೇಶ್ ತಿಳಿಸಿದರು.
   ಬುಧವಾರ ಅವರ ಕಚೇರಿಯಲ್ಲಿ ಈ ಸಂಬಂಧ ಆಯೋಜಿಸಿರುವ ಸಭೆಯಲ್ಲಿ ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಹುಮಹಡಿ ಕಟ್ಟಡಗಳಲ್ಲಿ ಕೆಲವರು ಬಾಲಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದು,ಇನ್ನು ಮುಂದಿನ ದಿನಗಳಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಮನೆಮನೆ ದಾಳಿ ಮಾಡಲಾಗುವುದು. ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ  ಸ್ಥಳದಲ್ಲೇ ರೂ.20,000/- ದಂಡ ವಿಧಿಸಲಾಗುವುದೆಂದು ಅವರು ತಿಳಿಸಿದರು.ಈಗಾಗಲೇ 2010 ರಿಂದ 2012 ರ ವರೆಗೆ 17 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಪಾರ್ಟ್ ಮೆಂಟ್ ಗಳಲ್ಲಿ ದಾಳಿ ಮಾಡಲು ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ಅಧಿಕಾರ ಪತ್ರವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
 ಬಾಲಕಾರ್ಮಿಕಪದ್ಧತಿ ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಮಾರ್ಚ್ 31 ರೊಳಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರ ನೀಡಬೇಕೆಂದು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ಕೋರಿದರು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಮಹೇಶ್ ಹಾಗೂ ಎಂ.ಆನಂದ ಮೂರ್ತಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.