Saturday, January 19, 2013

ಫೆಬ್ರವರಿ 8 ರಂದು ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಾಗಾರ

ಮಂಗಳೂರು, ಜನವರಿ.19:-ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 2013 ರ ಫೆಬ್ರವರಿ 8 ರಂದು ನಗರದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ``ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಾಗಾರ ''ವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷೆ ಶ್ರೀಮತಿ ವನಿತಾ ತೊರವೆ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಬಗ್ಗೆ ನಡೆದ ಪೂರ್ವಭಾವೀ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಬಾಲ ಕಾರ್ಮಿಕರು ಇರುವ  ಬಗ್ಗೆ ವರದಿಗಳಾಗುತ್ತಿದೆ.ಜಿಲ್ಲೆಯಲ್ಲಿ 10 ರಿಂದ 18 ವರ್ಷದೊಳಗಿನ ಶಾಲೆ ಬಿಟ್ಟ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದು,ಒಂದು ಅಂದಾಜಿನ ಪ್ರಕಾರ ಇವರ ಸಂಖ್ಯೆ 1000 ದಾಟಿದೆ ಎಂದು ಇಂದಿನ ಸಭೆಯಲ್ಲಿ ಹಾಜರಿದ್ದ ಅರಕ್ಷಕ ಇಲಾಖೆ ಅಧಿಕಾರಿ ಸಭೆಯಲ್ಲಿ ತಿಳಿಸಿದರು.  ಅಲ್ಲದೆ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನೆಲ್ಲಾ ತಡೆಗಟ್ಟಲು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಿದೆ.ಇದಕ್ಕಾಗಿ ಫೆಬ್ರವರಿ 8 ರಂದು ಜಿಲ್ಲಾ ಮಟ್ಟದ ಕಾರ್ಯಾಗಾರ ಹಮ್ಮಿಕೊಂಡಿದ್ದು,ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳ ಆಯ್ದ 400 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಮಕ್ಕಳ ರಕ್ಷಣಾ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶ್ರೀಮತಿ ವನಿತಾ ತೊರವಿ ತಿಳಿಸಿದರು.
ಕಾರ್ಯಾಗಾರಕ್ಕೂ ಮುನ್ನಾ ಶಾಲಾ ಮಕ್ಕಳಿಂದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಥಾ ಕಾರ್ಯಕ್ರಮ,ನಾಟಕ,ರೂಪಕ ಏರ್ಪಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಮಹೇಶ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಶಕುಂತಳಾ,ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧ್ಯಕ್ಷೆ ಶ್ರೀಮತಿ ಆಶಾ ನಾಯಕ್, ಶ್ರೀಮತಿ ಗ್ರೇಸಿ ಮುಂತಾದವರು ಉಪಸ್ಥಿತರಿದ್ದರು.