Friday, January 11, 2013

ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಖುದ್ದು ತೆರಳಿದ ಕೆ.ಎನ್.ವಿಜಯಪ್ರಕಾಶ್

ಮಂಗಳೂರು, ಜನವರಿ.11:-1994ಕ್ಕೂ ಮುಂಚೆ ಆರಂಭವಾದ ಖಾಸಗಿ ಶಾಲೆಗಳಿಗೆ ಸರ್ಕಾರ ಅನುದಾನ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ವರದಿ ಅಗತ್ಯವಾಗಿದೆ.ಆದರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವರದಿಯನ್ನು ತಾವಿರುವಲ್ಲಿಗೆ ತರಿಸಿ ಕಳುಹಿಸಬಹುದು.  ಆದರೆ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಪುತ್ತೂರು ತಾಲೂಕು ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಗೆ ಮತ್ತು ಕೊಲ್ಲಮೊಗ್ರುನಲ್ಲಿರುವ ಕೆವಿಜಿ ಪ್ರೌಢಶಾಲೆಗಳಿಗೆ  ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
            ಅಲ್ಲಿಯ ಶಾಲಾ ಕೊಠಡಿಗಳು, ಪೀಠೋಪಕರಣಗಳು,ಪಾಠೋಪಕರಣಗಳು,ವಿದ್ಯಾರ್ಥಿಗಳ ಹಾಜರಾತಿ,ಶಿಕ್ಷಕರ ಹಾಜರಾತಿ,ಶಾಲಾ ಆಟದ ಮೈದಾನ,ಶೌಚಾಲಯ ಇತರೆ ಮೂಲಭೂತ ಸೌಲಭ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಶಾಲಾ ವಿದ್ಯಾರ್ಥಿಗಳನ್ನು  ಸಹ ಮಾತನಾಡಿಸಿ ವಿಷಯ ಸಂಗ್ರಹಿಸಿದರಲ್ಲದೆ ಪಾಠಗಳಲ್ಲಿ ಹಿಂದಿರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುವಂತೆ ಹಾಗೂ ಆಂಗ್ಲ ಭಾಷೆ,ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚುವರಿಯಾಗಿ ತರಗತಿಗಳನ್ನು ನಡೆಸಲು ಸೂಚಿಸಿದರು.
ಕೊರಗರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದವರಾಗಿದ್ದು ಅವರ ಸರ್ವತೋಮುಖ ಅಭಿವೃದ್ಧಿಗೆ  ದಕ್ಷಿಣಕನ್ನಡ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ,ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳ ಸೌಲಭ್ಯಗಳು ಕೊರಗರಿಗೆ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಬೆಂಡೋಡಿಗೆ ಡಾ.ಕೆ.ಎನ್.ವಿಜಯಪ್ರಕಾಶ ಅವರೇ ಖುದ್ದು ಕೊರಗರ ನಿವಾಸಗಳಿಗೆ ತೆರಳಿ ಪರಿಶೀಲಿಸಿದರು.
ಅವರಿಗೆ ಐ.ಟಿ.ಡಿ.ಪಿ ಯಿಂದ ಮನೆ ಕಟ್ಟಿಕೊಳ್ಳಲು ನೀಡಲಾಗುತ್ತಿರುವ ರೂ.1 ಲಕ್ಷದ ಜೊತೆಗೆ ಇನ್ನೂ ರೂ.25 ಸಾವಿರ ಹೆಚ್ಚುವರಿ ಮಾಡುವಂತೆ ಸ್ಥಳದಲ್ಲಿಯೇ ಐ.ಟಿ.ಡಿ.ಪಿ ಅಧಿಕಾರಿಗೆ ಸೂಚಿಸಿದರು. ಅವರಿಗೆ ನೀಡುತ್ತಿರುವ ಬೇಳೆ,ಮೊಟ್ಟೆ,ಇತರೆ ಆಹಾರ ಪದಾರ್ಥಗಳನ್ನು ಸಹ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕೊರಗರ ಮನೆಯಲ್ಲಿ ಜನಿಸಿದ್ದ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದರು.
ಅಲ್ಲಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಿರ್ಮಿಸುತ್ತಿರುವ ನೂತನ ನೀರಿನ ಟ್ಯಾಂಕ್ ಕಾಮಗಾರಿ,ಅಂಗನವಾಡಿ ಕಟ್ಟಡ,ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಸಂಜೆ ಕಗ್ಗತ್ತಲ್ಲ್ಲಿ ಬೆಂಡೋಡಿ ಶಿರೂರು ಹೊಳೆಗೆ ಸಂಕ ನಿರ್ಮಿಸುವ  ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದೇ ರೀತಿ ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಮರಡ್ಕ ಚೆಕ್ಡ್ಯಾಂ ಕಾಮಗಾರಿ ವೀಕ್ಷಿಸಿದರು.
ಅಧಿಕಾರಿಗಳಲ್ಲಿ  ಮಾನಸಿಕ ಸಿದ್ಧತೆ ಹಾಗೂ ಆತ್ಮ ಸ್ಥೈರ್ಯ ಇದ್ದರೆ ಸಾರ್ವಜನಿಕರಿಗೆ ಉತ್ತಮ ಕೆಲಸಗಳು ನಡೆಯುತ್ತವೆ ಎಂಬುದಕ್ಕೆ ಈ ಮೇಲಿನ ದಷ್ಟಾಂತಗಳೇ ಸಾಕ್ಷಿ. ಅಲ್ಲದೆ ಉನ್ನತ ಅಧಿಕಾರಿಗಳು  ಕಾಮಗಾರಿಗಳ ಸ್ಥಳಕ್ಕೆ ತೆರಳಿ ಖುದ್ದು ಪರಿಶೀಲನೆ  ನಡೆಸಿದಲ್ಲಿ  ಕಾಮಗಾರಿಗಳ ಗುಣಮಟ್ಟವೂ ಸುಧಾರಿಸಿ ಸಮಸ್ಯೆ ಪರಿಹಾರವಾಗಿ ಸೌಲಭ್ಯಗಳು ದೊರಕಲಿವೆ ಎಂಬುದರಲ್ಲಿ ಸಂದೇಹವಿಲ್ಲ.
           ರಸ್ತೆ ಗುಣಮಟ್ಟ ತಿಳಿಯಲು ಪಿಕಾಸು ಹಿಡಿದ ಅಧಿಕಾರಿ- ಸರ್ಕಾರಿ ಕಾಮಗಾರಿ ಎಂದರೆ ಅದರ ಗುಣಮಟ್ಟವನ್ನಾಗಲೀ ಅಥವಾ ಕಾಮಗಾರಿ ಸಮರ್ಪಕವಾಗಿ ನಡೆದಿದಯೇ ಇಲ್ಲವೇ ಎಂಬ ಗೋಜಿಗೂ ಹೋಗದೆ ಹವಾನಿಯಂತ್ರಿತ ಕೊಠಡಿಯಲ್ಲಿ ಮೆತ್ತನೆ ತಿರುಗುವ ಗಾಲಿ ಕುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸುವ ಅಧಿಕಾರಿಗಳ ನಡುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಮಟಮಟ ಮಧ್ಯಾಹ್ನ ರಸ್ತೆ ಕಾಮಗಾರಿ ಮಾಡುವ ಕೂಲಿ ಆಳುಗಳಂತೆ ಪಿಕಾಸು ಹಿಡಿದು ರಸ್ತೆಯನ್ನು ಅಗೆದು ಪರೀಕ್ಷಿಸಿದ ಅಧಿಕಾರಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್,
     ಸುಳ್ಯ ತಾಲೂಕಿನ ಅತ್ಯಂತ ಕುಗ್ರಾಮ ಅದರಲ್ಲೂ ದಟ್ಟ ಕಾನನದ ನಡುವೆ ಮಳೆಯಾಳದಿಂದ ಹರಿಹರ ಪಲ್ಲತಡ್ಕಕ್ಕೆ ತೆರಳುವ 6.5 ಕಿಮೀ ಉದ್ದದ ನಬಾರ್ಡ್ ಯೋಜನೆಯ ರೂ.25 ಲಕ್ಷ ಅಂದಾಜು ವೆಚ್ಚದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಬಗ್ಗೆ ಸ್ಥಳೀಯ ಗುಂಡಡ್ಕ ಗ್ರಾಮಸ್ಥರು ದೂರಿದ  ತಕ್ಷಣ ಕಾರ್ಯ ಪ್ರವೃತ್ತರಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಗುತ್ತಿಗೆದಾರ ದಿನೇಶ್,ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸತ್ಯನಾರಾಯಣ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ದೇವರಾಜ್ ಅವರುಗಳು ನೋಡುತ್ತಿದ್ದಂತೆ ಪಿಕಾಸು ಹಿಡಿದು ಡಾಂಬರು ರಸ್ತೆಯನ್ನು ಅಗೆದು ಅದರ ಗುಣಮಟ್ಟ ಪರೀಕ್ಷಿಸಿದರಲ್ಲದೆ ಗುತ್ತಿಗೆದಾರರು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಉತ್ತಮ ಗುಣಮಟ್ಟದ ರಸ್ತೆಯನ್ನು ಮಾಡುವಂತೆ ಎಚ್ಚರಿಸಿದರು.