Wednesday, January 23, 2013

ಕರಾವಳಿ ಪರಿಸರ ರಕ್ಷಣೆಗೆ ಕಡಲತಡಿಯಲ್ಲಿ ಮಾನವ ಚಟುವಟಿಕೆ ನಿಲ್ಲಲಿ- ಡಾ. ಎಂ.ಸುಧಾಕರ್

ಮಂಗಳೂರು, ಜನವರಿ.22:-ವಿಶ್ವದಲ್ಲಿ ಶೇಕಡಾ 40 ರಷ್ಟು ಜನ ಕಡಲತಡಿಯಲ್ಲಿ ವಾಸಿಸುತ್ತಿದ್ದು,ಇದರಿಂದ ಕರಾವಳಿ ಪ್ರದೇಶದಲ್ಲಿ ಪರಿಸರ ಹಾಳಾಗುತ್ತಿದೆ.ಇಲ್ಲಿನ ಪರಿಸರ ಉಳಿವಿಗಾಗಿ ಕಡಲ ತಡಿಯಲ್ಲಿ ಮಾನವ ಚಟುವಟಿಕೆ ಮೇಲೆ ನಿಯಂತ್ರಣ ವಿಧಿಸುವ ಕಾಲ ಸನ್ನಿಹಿತವಾಗಿದೆ ಎಂದು ಭಾರತ ಸರ್ಕಾರದ ಭೂ ವೈಜ್ಞಾನಿಕ ಮಂತ್ರಾಲಯ ಸಲಹೆಗಾರರು ಹಾಗೂ ವಿಜ್ಞಾನಿಯಾಗಿರುವ ಡಾ.ಎಂ.ಸುಧಾಕರ್ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂವಿಜ್ಞಾನ ವಿಭಾಗದ ಆಶ್ರಯದಲ್ಲಿ ಹಳೆ ಸೆನೆಟ್ ಭವನದಲ್ಲಿ ಏರ್ಪಡಿಸಿರುವ  2 ದಿನಗಳ ` ಕಡಲ ತೀರದ ಪರಿಸರ ಮತ್ತು ನಿರ್ವಹಣೆ ' ಕುರಿತ ಬಯೋಗ್ರಾಫಿಕ್ಸ್ ಇನ್ಫಮರ್ೆಷನ್ ಸಿಸ್ಟಮ್ಸ್ ಸಾಫ್ಟ್ವೇರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
      ಭಾರತ ಸರ್ಕಾರ ಜಿಯೋಗ್ರಾಫಿಕ್ಸ್ ಇನ್ಫರ್ಮೇಷನ್ ಸಿಸ್ಟಮ್ ಸಾಫ್ಟ್ವೇರ್ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 4 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ವಿಶ್ವದಲ್ಲಿ ಭಾರತವೊಂದೇ ಭೂವಿಜ್ಞಾನದ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಪದವಿ,ಸ್ನಾತಕೊತ್ತರ ಪದವಿಗಳನ್ನು ಹೊಂದಿದ್ದು,ಈ ಬಗ್ಗೆ ವಿದೇಶಿಯರು ಆಶ್ಚರ್ಯದಿಂದ ನಮ್ಮನ್ನು ಕಾಣುವಂತಾಗಿದೆ. 21ನೇ ಶತಮಾನ ಭೂವಿಜ್ಞಾನದ ಶತಮಾನವಾಗಬೇಕೆಂದ ಡಾ.ಸುಧಾಕರ್ ಮುಂದಿನ 20 ವರ್ಷಗಳಲ್ಲಿ ಭೂವಿಜ್ಞಾನಿಗಳಿಗೆ  ಅತ್ಯಂತ ಬೇಡಿಕೆ ಹೆಚ್ಚಲಿದೆ ಎಂದರು.
ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಡಾ.ಎನ್.ಆರ್ ರಮೇಶ್ ,ಉಪನಿರ್ದೇಶಕರು ಭೂ ವೈಜ್ಞಾನಿಕ ಸರ್ವೇಕ್ಷಣೆ,ಕೊಲ್ಕತ್ತಾ ಇವರು ಮಾತನಾಡಿ, ಇಂದು ದೇಶದಲ್ಲಿ ಅನೇಕ ಕಾರಣಗಳಿಂದ ಕುಡಿಯುವ ನೀರಿನ ಮೂಲಗಳು ಕಲುಷಿತವಾಗುತ್ತಿವೆ. ಇದನ್ನು ತಡೆಗಟ್ಟಿ ಜನರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಬಗ್ಗೆ ಸರ್ವೇಕ್ಷಣೆಗಳಾಗುತ್ತಿವೆ ಎಂದು ತಿಳಿಸಿ,ನಮ್ಮ ದೇಶದಲ್ಲಿ ಸಿಗುತ್ತಿರುವ ಕಲ್ಲಿದ್ದಲು ಶೇಕಡಾ 60 ರಷ್ಟು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಪ್ರಮಾಣ ದ್ವಿಗುಣವಾಗುವ ಮುನ್ನ ಇತರೆ ಕಲ್ಲಿದ್ದಲು ನಿಕ್ಷೇಪಗಳ ಅನ್ವೇಷಣೆ ಆಗಬೇಕಿದೆ ಎಂದರು.
   ದೇಶದಲ್ಲಿ ಭೂ ವಿಜ್ಞಾನ ಕಲಿತವರಿಗೆ ಉತ್ತಮ ಭವಿಷ್ಯವಿದೆ ಎಂದ ಅವರು 2012-13 ರಲ್ಲಿ 270 ಜನ ಭೂವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರೀಯೆ ಆರಂಭವಾಗಿದೆ.ಹಾಗೇ 2015 ರಲ್ಲಿ 300 ಕ್ಕೂ ಹೆಚ್ಚು ಭೂವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳಲಾಗುವುದೆಂದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ವಹಿಸಿದ್ದರು. ಕುಲಸಚಿವರಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಸ್ವಾಗತಿಸಿದರು. ಡಾ.ಕೆ.ಎಸ್.ಜಯಪ್ಪ ವಂದಿಸಿದರು.