Thursday, January 17, 2013

ಯೋಗ ಚಿಕಿತ್ಸೆ -ರಾಷ್ಟ್ರೀಯ ಸಮ್ಮೇಳನ


 ಮಂಗಳೂರು, ಜನವರಿ.16: ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿ ಯೋಗಪೀಠ ಮತ್ತು ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಅಡಿಟೋರಿಯಂನಲ್ಲಿ ದಿನಾಂಕ 18 ಮತ್ತು 19 ಜನವರಿ 2013 ರಂದು ಯೋಗ ಚಿಕಿತ್ಸೆ-ರಾಷ್ಟ್ರೀಯ ಸಮ್ಮೇಳನಏರ್ಪಡಿಸಲಾಗಿದೆಯೆಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ.ಸಿ ಶಿವಶಂಕರ ಮೂರ್ತಿಯವರು  ತಿಳಿಸಿದರು.
ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಕುಲಪತಿಗಳು ನೀಡಿದರು. ಸಮ್ಮೇಳನವನ್ನು ಉನ್ನತ ಶಿಕ್ಷಣ ಸಚಿವರಾದ ಸಿ.ಟಿ.ರವಿಯವರು ದಿನಾಂಕ 18 ರಂದು ಬೆಳಿಗ್ಗೆ 9.30 ಗಂಟೆಗೆ ಉದ್ಘಾಟಿಸಲಿರುವರು. ಆಯುಷ್ ಇಲಾಖೆಯ ನಿರ್ದೇಶಕರಾದ ಜಿ.ಎನ್. ಶ್ರೀಕಂಠಯ್ಯ ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಸಭಾಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಟಿ ಶಿವಶಂಕರಮೂರ್ತಿ ಇವರು ವಹಿಸುವರು.ಸಮ್ಮೇಳನದ ದಿಕ್ಸೂಚಿ ಭಾಷಣವನ್ನು ಡಾ. ಕೆ. ಕೃಷ್ಣಭಟ್, ನಿವೃತ್ತ ಪ್ರಾಧ್ಯಾಪಕರು,ಯೋಗವಿಜ್ಞಾನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾಡಲಿರುವರು.
    ಯೋಗಚಿಕಿತ್ಸೆಯ ಬಗೆಗಿನ ಈ ರಾಷ್ಟ್ರೀಯ ಸಮ್ಮೇಳನವು ವಿವಿಧ ರೋಗಗಳಿಗೆ ಯೋಗ ಚಿಕಿತ್ಸೆ, ಆರೋಗ್ಯದ ರಕ್ಷಣೆಯಲ್ಲಿ ಯೋಗದ ಪ್ರಾಮುಖ್ಯ, ಯೋಗದ ವಿವಿಧ ಸಾಧ್ಯತೆಗಳು, ಆರೋಗ್ಯಪೂರ್ಣ ಜೀವನಕ್ಕೆ ಯೋಗದ ಕೊಡುಗೆ, ಯೋಗದ ಯಥಾರ್ಥಜ್ಞಾನ ಹಾಗೂ ಆಧುನಿಕ ವೈಜ್ಞಾನಿಕ ಉಪಕರಣಗಳನ್ನು ಉಪಯೋಗಿಸಿ ಯೋಗಚಿಕಿತ್ಸೆಯ ಅಧ್ಯಯನ ಇವುಗಳ ಬಗ್ಗೆ ಚಿಂತನೆ ನಡೆಸಲಿದೆ. ಅಲ್ಲದೆ, ಈ ಸಮ್ಮೇಳನವು ವಿಶೇಷವಾಗಿ ಯೋಗಚಿಕಿತ್ಸಕರಿಗೆ ವಿಚಾರ ವಿನಿಮಯದ ವೇದಿಕೆಯಾಗಲಿದೆ. ಯೋಗಚಿಕಿತ್ಸೆಯ ಬಗ್ಗೆ ಜನಾಭಿಪ್ರಾಯವನ್ನು ಮೂಡಿಸುವುದು, ಯೋಗಚಿಕಿತ್ಸೆಯ ರಾಷ್ಟ್ರೀಯ ನೀತಿಯನ್ನು ರೂಪುಗೊಳಿಸುವುದು ಅಲ್ಲದೆ  ಯೋಗವನ್ನು ಶಿಕ್ಷಣದಲ್ಲಿ ಅಧ್ಯಾಯನ ವಿಷಯವಾಗಿ ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸುವುದು ಈ ಸಮ್ಮೇಳನದ ಉದ್ದೇಶಗಳಾಗಿರುತ್ತವೆ.
    ಹರಿದ್ವಾರದ ಅಂತರಪ್ರಕಾಶ ಯೋಗ ಕೇಂದ್ರದ ಡಾ| ಪ್ರಕಾಶ ಮಾಲ್ಶೆ, ಹೈದರಾಬಾದ್ನ    ಶ್ರೇಷ್ಟ ಯೋಗ ವಿದ್ವಾಂಸರಾದ  ವೆಂಕಟರೆಡ್ಡಿ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಮತ್ತು ನರರೋಗ ಸಂಸ್ಥೆಯ ಡಾ| ಬಿ.ಎನ್. ಗಂಗಾಧರ್, ಮಧ್ಯಪ್ರದೇಶದ ಸಾಗರ್ನ ಕೇಂದ್ರೀಯ ವಿಶ್ವವಿದ್ಯಾನಿಲಯದ ಡಾ| ಗಣೇಶ್ ಶಂಕರ್, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಡಾ| ಎನ್.ಬಿ ಶುಕ್ಲ ಮತ್ತಿತರ ಖ್ಯಾತ ವಿದ್ವಾಂಸರು ಆಹ್ವಾನಿತ ಉಪನ್ಯಾಸಗಳನ್ನು ನೀಡಲಿದ್ದಾರೆ.
    ವ್ಯಕ್ತಿತ್ವ ವಿಕಸನ, ಯೋಗ ಮತ್ತು ಆರೋಗ್ಯ, ವೃದ್ಧಾಪ್ಯ ರೋಗಗಳಿಗೆ ಯೋಗ, ಯೋಗ ಮತ್ತು ಕ್ರೀಡೆ, ಜೀವನದ ವಿವಿಧ ಹಂತಗಳಲ್ಲಿ ಯೋಗ, ಜೀವನ ಕ್ರಮ, ಆಹಾರ ಪದ್ದತಿ, ದಿನಚರಿ ಈ ಎಲ್ಲಾ ವಿಷಯಗಳ ಬಗ್ಗೆ ದೇಶದ ವಿವಿಧೆಡೆಗಳಿಂದ ಆಗಮಿಸುವ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿರುವರು.
ಸಮ್ಮೇಳನದ ಸಮಾರೋಪವು ದಿನಾಂಕ 19-01-2013 ರ ಸಂಜೆ 3.30 ಗಂಟೆಗೆ ನಡೆಯಲಿದೆ. ಭಾರತ ಸರಕಾರದ ಬಾಹ್ಯಾಕಾಶ ಆಯೋಗ, ಅಣುಶಕ್ತಿ ಆಯೋಗ ಹಾಗೂ ಭೂವಿಜ್ಞಾನ ಆಯೋಗಗಳ ಕಾರ್ಯದರ್ಶಿಗಳಾಗಿರುವ ಹಿರಿಯ ಐ ಎ ಎಸ್ ಅಧಿಕಾರಿ  ವಿ. ವಿ. ಭಟ್ ಹಾಗೂ ಕರ್ನಾಟಕ ಸರಕಾರದ ಆಯುಷ್ ಇಲಾಖೆಯು ಜಿಲ್ಲಾ ಅಧಿಕಾರಿಗಳಾಗಿರುವ  ಸದಾಶಿವಾನಂದ ಇವರು ಅತಿಥಿಗಳಾಗಿರುವರು. ಮಂಗಳೂರು ವಿಶ್ವವಿದ್ಯಾನಿಲ0ುದ ಕುಲಸಚಿವರಾದ ಪ್ರೊ. ಪಿ. ಎಸ್. ಯಡಪಡಿತ್ತಾಯ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ,ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಕೆ.ಕೃಷ್ಣಶರ್ಮ, ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್ಟ ಎಚ್.ಆರ್. ಉಪಸ್ಥಿತರಿದ್ದರು.

ಪ್ರಪಂಚದ ಯಾವುದೇ ವಿಶ್ವವಿದ್ಯಾನಿಲಯದಲ್ಲೂ ಪೂರ್ಣಪ್ರಮಾಣದ ಯೋಗವಿಭಾಗವು ಇಲ್ಲದಿದ್ದಾಗ ಯೋಗದ ವಿಚಾರಗಳ ಬೋಧನೆ ಅಧ್ಯಯನ, ಯೋಗ ಚಿಕಿತ್ಸೆ ಮತ್ತು ಸಂಶೋಧನೆ ಇವುಗಳನ್ನುಉದ್ದೇಶವಾಗಿಟ್ಟುಕೊಂಡುಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಘೆಯ ಅಡಿಯಲ್ಲಿ  ದೇಶದಲ್ಲಿಯೇ ಮೊತ್ತ ಮೊದಲನೆಯ ವಿಭಾಗವಾಗಿ ಯೋಗ ವಿಜ್ಞಾನ ವಿಭಾಗವು ಆರಂಭವಾಯಿತು. ಈ ವಿಭಾಗದ ವತಿಯಿಂದ ಈ ರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -ಡಾ. ಕೆ. ಕೃಷ್ಣ ಶರ್ಮ,   ಸಂಘಟನಾ ಕಾರ್ಯದರ್ಶಿ ಯೋಗ ತೆರಪಿ ರಾಷ್ಟ್ರೀಯ ಸಮ್ಮೇಳನ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ  -574 199. ದೂರವಾಣಿ :  0824-2287435  +91 9448241005,  +91 9449131583 - ಶ್ರೀ ತಿರುಮಲೇಶ್ವರ ಪ್ರಸಾದ ಎಚ್., ಕೋಶಾಧಿಕಾರಿ   4) +91 9481020080 - ಡಾ| ಉದಯ ಕುಮಾರ ಕೆ., ಜಂಟಿಕಾರ್ಯದರ್ಶಿ.   E ಮೇಲ್:yogatherapymu@gmail.com, scienceyoga@rediffmail.com, ವೆಬ್ ಸೈಟ್: www.mangaloreuniversity.ac.in