Monday, January 7, 2013

ಜಾಗೃತಿಯೊಂದೇ ಅಪಘಾತಗಳ ತಡೆಗೆ ಪರಿಹಾರ- ಎನ್ ಯೋಗೀಶ್ ಭಟ್

ಮಂಗಳೂರು, ಜನವರಿ.07: ಕಾನೂನು ,ದಂಡ ಯಾವುದೂ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.ಆದ್ದರಿಂದ  ಜನರಲ್ಲಿ ವಾಹನ ಚಾಲಕರಲ್ಲಿ ಸುರಕ್ಷಿತ ಚಾಲನೆ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ ಎಂದು ವಿಧಾನಸಭೆ ಉಪಸಭಾಪತಿ ಎನ್.ಯೋಗೀಶ್ ಭಟ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
          ಅವರು ಇಂದು ಮಂಗಳೂರು ನಗರದ ಪುರಭವನದಲ್ಲಿ ಜಿಲ್ಲಾಡಳಿತ,ಸಾರಿಗೆ ಇಲಾಖೆ ಹಾಗೂ ಪೋಲೀಸ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ 24ನೇ ರಾಷ್ಟ್ರೀಯ  ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಾಗೃತ ಚಾಲನೆ ತಮಗೂ ಕ್ಷೇಮ ಇತರರಿಗೂ ಕ್ಷೇಮ ಎಂಬುದನ್ನು ಅರಿತು ರಸ್ತೆಯಲ್ಲಿ ಹೋಗುವ ಪಾದಾಚಾರಿ ದ್ವಿಚಕ್ರ ವಾಹನ ಸವಾರರು ತನ್ನ ಅಣ್ಣ ತಮ್ಮ ಅಕ್ಕ ತಂಗಿ ಎಂಬ ಭಾವನೆ ರೂಡಿಸಿಕೊಂಡಲ್ಲಿ ಶೇಕಡಾ 30 ರಷ್ಟು ಅಪಘಾತಗಳು ಕಡಿಮೆಯಾಗಲಿವೆ ಎಂದರು.
  ಸಪ್ತಾಹವನ್ನು ಉದ್ಘಾಟಿಸಿದ ನಿಟ್ಟೆ ವಿಶವ್ವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಶಾಂತಾರಾಮ ಶೆಟ್ಟಿ ಅವರು ಮಾತನಾಡಿ ವಿಶ್ವದಲ್ಲಿ ಪ್ರತೀ ವರ್ಷ ಅಪಘಾತಗಳಿಂದ 1.20 ಕೋಟಿ ಜನ ಸಾಯುತ್ತಾರೆ. ಭಾರತದಲ್ಲಿ ಪ್ರತೀ ವರ್ಷ 1 ಲಕ್ಷಕ್ಕೂ ಹೆಚ್ಚು ಜನ   ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ವಾಹನ ಅಪಘಾತಗಳನ್ನು  ತಪ್ಪಿಸಲು ಚಾಲಕರು ಮದ್ಯಪಾನವನ್ನು ಮಾಡದೇ ವಾಹನ ಚಲಾಯಿಸುವುದು ಹಾಗೂ ನಿರ್ಲಕ್ಷ್ಯತೆಯಿಂದ  ವಾಹನ ಚಾಲನೆ ಮಾಡದೇ, ರಸ್ತೆಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕೆಂದರು.
ಪಶ್ಚಿಮ ವಲಯ ಪೋಲೀಸ್ ಮಹಾ ನಿರಿಕ್ಷಕರಾದ ಚಿ.ಎಚ್. ಪ್ರತಾಪ ರೆಡ್ಡಿ ಮಾತನಾಡಿ  ರಸ್ತೆ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳಾಗಿ ಸಾಯುವವರ ಹಾಗೂ ಅಂಗ ಊನರಾಗುವವರ ಸಂಖ್ಯೆ ಇತರೆ ಅಪರಾಧಗಳಿಗಿಂತ ಹೆಚ್ಚಾಗಿದೆ ಎಂದು ತಿಳಿಸಿ ಕಾನೂನು ಒಂದೇ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ.ಎಲ್ಲರೂ ಇದಕ್ಕೆ ಸ್ಪಂದಿಸಿ ವಾಹನ ಚಾಲನೆ ಮಾಡಿದರೆ ಅಪಘಾತಗಳ ಪ್ರಮಾಣ ತಗ್ಗಿಸಬಹುದೆಂದರು.
  ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಮಾತನಾಡಿ ವಾಹನ ಚಾಲಕರು ವಾಹನ ಚಾಲ್ತಿಯಲ್ಲಿರುವಾಗ ಮೊಬೈಲ್ ಬಳಸದಂತೆ ಕರ್ಕಶ ಹಾರ್ನ್ ಗಳನ್ನು ಬಳಸದಂತೆ ತಿಳಿಸಿ ಕಾರು ಬಸ್ಸು ಲಾರಿ ವಾಹನಗಳಂತಹ ಭಾರೀ ವಾಹನ ಚಾಲಕರು ಸೈಕಲ್ ಹಾಗೂ ಇನ್ನಿತರೆ ದ್ವಿಚಕ್ರ ವಾಹನಗಳನ್ನು ಚಲಾಯಿಸುವವರ ಬಗ್ಗೆ ನಿಕೃಷ್ಟವಾಗಿ ಕಾಣುವುದನ್ನು ಬಿಡಬೇಕೆಂದರು.
 ಉಪ ಪೋಲೀಸ್ ಆಯುಕ್ತ ಧರ್ಮಯ್ಯ,ಎಲ್.ಆಂಡ್ ಟಿಯ ನಾಗೇಶ್ ರಾವ್ ಮುಂತಾದವರು ಮಾತನಾಡಿದರು. ಪ್ರಾದೇಶಿಕ ಸಾರಿಗೆಅಧಿಕಾರಿ ಮಲ್ಲಿ ಕಾರ್ಜುನ ಸ್ವಾಗತಿಸಿದರು. ಸಮಾರಂಭಕ್ಕೂ ಮುನ್ನ ಬಾವುಟ ಗುಡ್ಡೆಯಿಂದಪುರಭವನ ತನಕ ಶಾಲಾ ಮಕ್ಕಳಿಂದ ಆಕರ್ಷಕ ಜಾಥಾ ನಡೆಯಿತು.