Tuesday, March 20, 2012

ಸಕಾಲ 'ಪ್ರತಿಕ್ರಿಯೆ' ಗೆ ವಿಡಿಯೋಕಾನ್ಫರೆನ್ಸ್

ಮಂಗಳೂರು,ಮಾರ್ಚ್.20: ಸಕಾಲದಲ್ಲಿ ಸರ್ಕಾರದ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ನಾಲ್ಕು ಜಿಲ್ಲೆಗಳ ನಾಲ್ಕು ತಾಲೂಕುಗಳಲ್ಲಿ ಪೈಲಟ್ ಯೋಜನೆಯ ಸಾಧಕ ಬಾಧಕ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್ ನೇತೃತ್ವದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು, ಬೀದರ್, ಧಾರವಾಡ, ಚಿತ್ರದುರ್ಗದ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋಕಾನ್ಫರೆನ್ಸ್ ನಡೆಸಿದರು.
ದಕ್ಷಿಣ ಕನ್ನಡದಲ್ಲಿ ಸಕಾಲ ಜಾರಿಯಿಂದ ಜನರಿಗಾದ ಅನುಕೂಲಗಳು ಮತ್ತು ಅರ್ಜಿಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದುಕೊಂಡ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ ಅನುಷ್ಠಾನಕ್ಕೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲೆಯ ಪುತ್ತುರು ತಾಲೂಕಿನಲ್ಲಿ ಸಕಾಲ ಯೋಜನೆಯಡಿ ಸ್ವೀಕರಿಸಲಾದ 3401 ಅರ್ಜಿಗಳಲ್ಲಿ 3085 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂಬ ಮಾಹಿತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದರು. ಪ್ರಾದೇಶಿಕ ಸಾರಿಗೆ ಇಲಾಖೆ ಅತೀ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, 2254 ಅರ್ಜಿಗಳಲ್ಲಿ 2118 ಅರ್ಜಿಗಳನ್ನು ವಿಲೇ ಮಾಡಿದೆ. ಇನ್ನುಳಿದಂತೆ ಕಂದಾಯ ಇಲಾಖೆ 415 ಅರ್ಜಿಗಳಲ್ಲಿ 325 ಅರ್ಜಿಗಳನ್ನು, ಪುರಸಭೆ 352 ಅರ್ಜಿಗಳನ್ನು ಸ್ವೀಕರಿಸಿದ್ದು 312 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್175 ಅರ್ಜಿಗಳಲ್ಲಿ 152, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 32ರಲ್ಲಿ 30 ಅರ್ಜಿಗಳನ್ನು ವಿಲೇ ಮಾಡಿದ್ದು, ಸಕಾಲ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು. ಇನ್ನುಳಿದಂತೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 64 ಅರ್ಜಿಗಳಲ್ಲಿ 32 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಗೃಹ, ಕಾರ್ಮಿಕ ಇಲಾಖೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗಳಲ್ಲಿ ಅರ್ಜಿಗಳು ಸ್ವೀಕರಿಸಲಾಗಿದ್ದು ಸಕಾಲದಲ್ಲಿ ಅರ್ಜಿ ವಿಲೇ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಇನ್ನುಳಿದಂತೆ ಸೌಕರ್ಯಗಳ ಬಗ್ಗೆ ಹಾಗೂ ಕೆಲವು ಇಲಾಖೆಗಳಲ್ಲಿ ಅನುಷ್ಠಾನಕ್ಕೆ ಇರುವ ತೊಂದರೆಯ ಬಗ್ಗೆ ಚರ್ಚಿಸಲಾಯಿತು. ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಅವರು, ಜಿಲ್ಲಾಧಿಕಾರಿಗಳ ವಿವೇಚನೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ನಿರ್ದೇಶನ ನೀಡಿರುವುದಾಗಿ ನುಡಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಆರ್ ಟಿ ಒ ಮಲ್ಲಿಕಾರ್ಜುನ್, ಡಿ ಎಚ್ ಒ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.