Friday, March 30, 2012

ಕುಡಿಯಲು ನೀರಿದೆ; ಆದರೆ ದುರ್ಬಳಕೆ ಸಲ್ಲದು: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.30:ಮಂಗಳೂರು ನಗರಕ್ಕೆಕುಡಿಯುವ ನೀರು ಸರಬರಾಜಾಗುವ ತುಂಬೆ ಅಣೆಕಟ್ಟಿನಲ್ಲಿ ಸಕಾಲದಲ್ಲಿ ಕೈಗೊಂಡ ಕ್ರಮಗಳಿಂದಾಗಿ ನೀರಿನ ಮಟ್ಟ ಹೆಚ್ಚಿದ್ದು, ನೀರನ್ನು ಮಿತವಾಗಿ ಬಳಸುವುದರಿಂದ ನೀರಿನ ತೊಂದರೆ ಉದ್ಭವಿಸದು ಎಂದು ದ.ಕ.ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ.ಕೈಗಾರಿಕೆಗಳು ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿದ್ದು, ಎಂ ಆರ್ ಪಿ ಎಲ್ ಬಳಸುವ ನೀರಿನ ಪ್ರಮಾಣವನ್ನು 2.5 ಎಂ ಜಿ ಕಡಿಮೆಗೊಳಿಸಿದೆ. ಕಿರು ಜಲವಿದ್ಯುತ್ ಘಟಕಗಳು ನೀರನ್ನು ಬಳಸುತ್ತಿಲ್ಲ ಎಂದೂ ಅವರು ನುಡಿದರು.ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸುವ ಉಸ್ತುವಾರಿಯನ್ನು ಆಯಾಯ ತಾಲೂಕು ಪಂಚಾಯತ್ ಸಹಾಯಕ ಅಭಿಯಂತರರಿಗೆ ನೀಡಲಾಗಿದೆ.
ನೀರು ಸಂಬಂಧಿ ದೂರುಗಳನ್ನು ಆಲಿಸಿ ಆದ್ಯತೆಯ ಮೇರೆಗೆ ಪರಿಹಾರ ನೀಡಲು ಇವರಿಗೆ ನಿರ್ದೇಶನ ನೀಡಲಾಗಿದ್ದು, ತುರ್ತು ಕ್ರಮಗಳ ಬಗ್ಗೆ ಸಿಇಒ/ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಸೂಚಿಸಲಾಗಿದೆ ಎಂದರು.