Wednesday, March 28, 2012

ಏ.20ರೊಳಗೆ ಮಕ್ಕಳ ಸಮಗ್ರ ವರದಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.27:ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಕುರಿತು ಹಾಗೂ ಸಮಗ್ರವಾಗಿ ಒಂದರಿಂದ ಐದು ವರ್ಷಗಳ ಮಕ್ಕಳ ಕುರಿತ ಮಾಹಿತಿಯನ್ನು ಏಪ್ರಿಲ್ 20ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಸ್ಥಾಪನೆ ಕುರಿತ ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಕುರಿತ ಸಮಗ್ರ ಮಾಹಿತಿ ಜಿಲ್ಲಾಡಳಿತಕ್ಕೆ ಅಗತ್ಯವಿದ್ದು, ಅಂಕಿ ಅಂಶಗಳು ಆನ್ ಲೈನ್ ನಲ್ಲಿ ಲಭ್ಯವಿರಬೇಕೆಂದರು. ತಾಲೂಕುವಾರು ಮಾಹಿತಿ ಪಕ್ಕಾ ಇರಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರತಿ ದಿನ ಕನಿಷ್ಠ ಐದು ಅಂಗನವಾಡಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿ. ಎಲ್ಲ ಅಂಗನವಾಡಿಗಳು ನಿರ್ದಿಷ್ಟ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆಯೇ; ಅಲ್ಲಿನ ಮಕ್ಕಳ ಬಗ್ಗೆ, ಅಪೌಷ್ಠಿಕ ಮಕ್ಕಳ ಬಗ್ಗೆ ಏನು ಕಾಳಜಿ ವಹಿಸಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ತಾಲೂಕು ಆರೋಗ್ಯಾಧಿಕಾರಿಗಳು ವಾರಕ್ಕೊಮ್ಮೆ ಅಂಗನವಾಡಿಗಳಿಗೆ ಭೇಟಿ ನೀಡಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ನರಳಿದರೆ ಇಲಾಖೆಗಳನ್ನು ಹೊಣೆ ಮಾಡಲಾಗುವುದೆಂಬ ಎಚ್ಚರಿಕೆಯನ್ನೂ ನೀಡಿದರು.