Saturday, March 10, 2012

ಮಕ್ಕಳನ್ನು ಒತ್ತಡ ಮುಕ್ತರನ್ನಾಗಿಸಿ- ಕೆ ಟಿ ಶೈಲಜಾಭಟ್

ಮಂಗಳೂರು,ಮಾರ್ಚ್.10: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ನಾಣ್ಣುಡಿ. ಆದರೆ ನಮ್ಮ ಮಕ್ಕಳನ್ನು ಒತ್ತಡದಲ್ಲಿ ಬೆಳೆಸುತ್ತಿದ್ದೇವೆ. ಹೂವು ತಾನಾಗಿ ಅರಳಬೇಕು; ಮಕ್ಕಳು ಹೂಗಳಂತೆ. ಅವರನ್ನು ಮುಕ್ತವಾಗಿ ಬೆಳೆಯಲು ಬಿಡಬೇಕು ಎಂದು ದ,ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಹೇಳಿದರು.
ಅವರು ಶುಕ್ರವಾರ ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಅಕಾಡೆಮಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವರನ್ನು ಒತ್ತಡದಲ್ಲಿ ಸಿಲುಕಿಸದೆ ಪ್ರೋತ್ಸಾಹಿಸಬೇಕೆಂದ ಅಧ್ಯಕ್ಷರು, ಅಭಿವೃದ್ಧಿಗೆ ಪೂರಕ ವಾತಾವರಣ ರೂಪಿಸಬೇಕೆಂದರು. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದ ಅವರು, ಶಿಕ್ಷಕರು, ಪೋಷಕರು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕೆಂದರು.
ಸಮಾರಂಭವನ್ನು ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ ನಾಗರಾಜ ಶೆಟ್ಟಿ ಅವರು, ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಮಾರ್ಗದರ್ಶನದಿಂದ ಅವರು ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು. ದ.ಕ ಜಿಲ್ಲಾ ಬಾಲವಿಕಾಸ ಜಿಲ್ಲಾ ಕಾರ್ಯಾನುಷ್ಠಾನ ಸಮಿತಿ ಸದಸ್ಯರಾದ ಮೌನೇಶ್ ಮಾತನಾಡಿದರು. ಶ್ರೀಮತಿ ಆಶಾ ನಾಯಕ್ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ, ಶ್ರೀಮತಿ ಶಕುಂತಲಾ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ಸ್ವಾಗತಿಸಿದರು.
ದ. ಕ. ಜಿಲ್ಲಾ ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೊಸೆಸ್ ಜಯಶೇಖರ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಉಪಸ್ಥಿತರಿದ್ದರು.