Wednesday, March 14, 2012

ಎಲ್ಲರ ಸಹಕಾರದಿಂದ ಬಾಲ ಸೃಜನೋತ್ಸವ ಯಶಸ್ವಿ - ಸುಲೋಚನ ಭಟ್

ಮಂಗಳೂರು,ಮಾರ್ಚ್.14:ಮಂಗಳೂರಿನಲ್ಲಿ ಬಾಲಭವನ ಸೊಸೈಟಿ ಬೆಂಗಳೂರು ಇವರ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಬಾಲಸೃಜನೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು ಎಂದು ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ,ಬಾಲಭವನ ಸಂಘಟನೆಗಳು ಪ್ರಶಂಸೆಗಳ ಮಹಾಪೂರವನ್ನೇ ಹರಿಸುತ್ತಿದ್ದು,ಇದಕ್ಕೆ ತಾವೊಬ್ಬರೇ ಕಾರಣರಲ್ಲ ಬದಲಾಗಿ ಇದಕ್ಕಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳು, ಅಧಿಕಾರೇತರರು ಎಲ್ಲರೂ ಕಾರಣರಾಗಿದ್ದಾರೆ ಎಂದು ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಭಟ್ ಅವರು ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನ ಬಾಲಭವನದಲ್ಲಿ ಸೃಜನೋತ್ಸವ ಯಶಸ್ಸಿಗೆ ಕಾರಣರಾದವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.ಬಾಲ ಸೃಜನೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಎಲ್ಲವು ಅಚ್ಚುಕಟ್ಟಾಗಿ ಯೋಜನಾಬದ್ಧವಾಗಿ ನಡೆಯಿತು. ಇದು ಜಿಲ್ಲೆಗೂ ಹಾಗೂ ರಾಜ್ಯಕ್ಕೂ ಹೆಮ್ಮೆ ತರುವಂತಹ ಸಂಗತಿಯಾಗಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ, ವಿನೂತನವಾಗಿ ಪಿಲಿಕುಳದ ನಿಸರ್ಗದ ಮಡಿಲಿನಲ್ಲಿ ಸೃಜನೋತ್ಸವವು ಅತ್ಯಂತ ಯಶಸ್ವಿಯಾಗಿದ್ದು, ಜಿಲ್ಲಾ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದ ಅವರು, ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು ಎಂದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ದಯಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀಮತಿ ಸೀತಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್ ಮುಂತಾದವರು ಹಾಜರಿದ್ದರು.