Tuesday, June 7, 2011

ಅನುದಾನ ಲ್ಯಾಪ್ಸ್ ಆದರೆ ಅಧಿಕಾರಿಗಳೇ ಹೊಣೆ: ಸಂಸದ ನಳಿನ್ ಕುಮಾರ್

ಮಂಗಳೂರು,ಜೂನ್.07:ಸಂಸದರ ನಿಧಿಯಿಂದ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಗೆ ಒಟ್ಟು 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ 1.27 ಕೋಟಿ ಹಣ ವೆಚ್ವವಾಗಿದ್ದು, ಹೆಚ್ಚಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದ ಅಭಿವೃದ್ದಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯನ್ನು ದ್ದೇಶಿಸಿದ ಮಾತನಾಡಿದ ಸಂಸದರು, ಆಗದ ಕಾಮಗಾರಿಗಳಿಗೆ ತಕ್ಷಣ ಬದಲೀ ಪ್ರಸ್ತಾವನೆ ಕಳುಹಿಸಿ; ಅಂದಾಜುಪಟ್ಟಿ ಮಾಡಿ ರೂಪಿಸಿದ ಕಾಮಗಾರಿಗಳನ್ನು ಸಮಯಮಿತಿ ನಿಗದಿಪಡಿಸಿ ಮುಕ್ತಾಯಗೊಳಿಸಿ ಎಂದರು. ಕಾಮಗಾರಿಗಳು ಅಗತ್ಯ ವೇಗದಲ್ಲಿ ಆಗದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಮ್ಮ ಅನುದಾನ ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗಬಾರದೆನ್ನುವ ಉದ್ದೇಶವನ್ನಿರಿಸಿ ಪ್ರತೀ ಮೂರು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದು, ತಾಂತ್ರಿಕ ಅಥವಾ ಇನ್ನಾವುದೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿ ವಿವರ ಸಲ್ಲಿಸಲು, ಅಂದಾಜುಪಟ್ಟಿ ತಯಾರಿಸಲು ಆರೇಳು ತಿಂಗಳು ಸಮಯ ಪೋಲು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಯಾವುದೇ ಕಾಮಗಾರಿಯನ್ನು ಮಾಡಲಾಗದಿದ್ದರೆ ತಕ್ಷಣ ತನ್ನ ಗಮನಕ್ಕೆ ತನ್ನಿ. ಆ ಕಾಮಗಾರಿಯನ್ನು ಬಾಕಿ ಇಡಬೇಡಿ ಎಂದು ನಿರ್ದೇಶಿಸಿದ ಅವರು 05-06 ನೇ ಸಾಲಿನ ಅಂದರೆ ಸಂಸದ ಡಿ.ವಿ.ಸದಾನಂದ ಗೌಡರ ಅನುದಾನದ ಬಳಕೆ ಬಾಕಿ ಇರುವ ಬಗ್ಗೆ ಕ್ರಮಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಅಡಿ ಬರುವ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಸವಿವರ ಪರಿಶೀಲನೆ ನಡೆಸಿದ ಸಂಸದರು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಸೈಟ್ ಗಳಲ್ಲಿ ಇಂಜಿನಿಯರ್ ಗಳು ಹಾಜರಿರದ ಬಗ್ಗೆಯೂ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಕೋರಿಕೆಯಂತೆ ಮಹಾನಗರಪಾಲಿಕೆಗೆ ತಾವು ನೀಡಿರುವ ಅನುದಾನ ಸದ್ಬಳಕೆಯಾಗದಿರುವ ಬಗ್ಗೆ ಕೋಪಗೊಂಡ ಸಂಸದರು,ಇನ್ನು ಮುಂದೆ ಪಾಲಿಕೆಗೆ ತಾವು ತಮ್ಮ ಅನುದಾನದಿಂದ ಒಂದು ಪೈಸೆಯನ್ನೂ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು. ಅಧಿಕಾರಿಗಳು ತಾವು ನೀಡಿದ ಅನುದಾನದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕರ್ತವ್ಯಲೋಪವೆಸಗಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ತಾವು ಕಚೇರಿಗೆ ಭೇಟಿ ನೀಡಿದಾಗಲೂ ನೀಡಿಲ್ಲ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳು ಮಾತನಾಡಿ, 05-06ನೇ ಸಾಲಿನ ಕಾಮಗಾರಿಗಳ ಹಣ ಬಾಕಿ ಇರುವುದು ನಾಚಿಕೆಗೇಡಿನ ಸಂಗತಿ ಎಂದರಲ್ಲದೆ, 46 ಕಾಮಗಾರಿಗಳ ಬಳಕೆ ಪ್ರಮಾಣಪತ್ರವನ್ನು ನಾಳೆ ಸಂಜೆಯೊಳಗೆ ಸಲ್ಲಿಸಿ ಕಾಮಗಾರಿ ಅಭಿವೃದ್ದಿಯನ್ನು ಸಂಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಸೂಚಿಸಿದರು. ಎಲ್ಲ ಕಾಮಗಾರಿಗಳ ಬಗ್ಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸಮಯಮಿತಿ ನಿಗದಿಗೊಳಿಸಿದರು. ಇನ್ನುಳಿದ 48 ಕಾಮಗಾರಿಗಳನ್ನು 15 ದಿನಗಳೊಳಗೆ ಮುಗಿಸಲು ಸೂಚಿಸಿದರು.
ಮಳೆಗಾಲದ ಈ ಸಂದರ್ಭದಲ್ಲಿ ಜೂನಿಯರ್ ಇಂಜಿನಿಯರ್ ಗಳು ಒಂದು ವಾರದೊಳಗೆ ಮುಗಿದ ಕಾಮಗಾರಿಗಳ ಬಗ್ಗೆ ತರ್ಡ್ ಪಾರ್ಟಿ ಇನ್ಸ್ ಪೆಕ್ಷನ್ ವರದಿಯನ್ನು ಒಂದು ವಾರದೊಳಗೆ ಕಳುಹಿಸಬೇಕೆಂದರಲ್ಲದೆ ಜ್ಯೂನಿಯರ್ ಇಂಜಿನಿಯರ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸಮಾಡಬೇಕೆಂದರು.ಸಂಸದರ ನಿಧಿಯಡಿ ನೀಡಿದ ಕುಡಿಯುವ ನೀರು ಯೋಜನೆ, ದಾರಿದೀಪ ಹಾಗೂ ನೀರಿನ ಟಾಂಕಿ ನಿರ್ಮಾಣ ಕಾಮಗಾರಿ ಮುಗಿದ ತಕ್ಷಣ ಪಂಚಾಯತ್ ಗೆ ವರ್ಗಾವಣೆ ಮಾಡಿದ ವರದಿ ಸಂಬಂಧಿತ ಅಧಿಕಾರಿಗಳು ಇರಿಸಿಕೊಳ್ಳಬೇಕೆಂದರು. ಪ್ರಸಕ್ತ ಸಾಲಿನಿಂದ ರಸ್ತೆಗಳಿಗೆ 5ಲಕ್ಷ ರೂ.ಗಳಿಗಿಂತ ಹೆಚ್ಚು ಅನುದಾನ ನೀಡುವ ಭರವಸೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಸಭೆಯಲ್ಲಿ ನೀಡಿದರು. ಅನುದಾನದ ಸದ್ಬಳಕೆಯಾಗದಿದ್ದರೆ ತಮಗೆ ಮುಂದಿನ ಸಾಲಿನ ಅನುದಾನ ಬರುವುದರಲ್ಲಿ ಕಡಿತ ಉಂಟಾಗಲಿದ್ದು, ತಮ್ಮ ಅನುದಾನದ ಹಣ ಗ್ರಾಮೀಣರಿಗೆ ನೆರವಾಗಲು ಸದ್ಬಳಕೆಯಾಗಬೇಕು. ತಮ್ಮ ಅನುದಾನದಡಿ ನಡೆಯುವ ಕಾಮಗಾರಿಗಳ ಅನುಷ್ಠಾನ ಸಮರ್ಪಕವಾಗಿ ನಡೆಯಬೇಕೆಂಬುದೇ ತಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಲೋಕೋಪಯೋಗಿ ಇಂಜಿನಿಯರ್ ಗೋಪಾಲ್ ನಾಯ್ಕ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಸತ್ಯನಾರಾಯಣ, ಮಹಾನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.