Thursday, June 2, 2011

ಚೇಳೂರಿಗೆ ಜಿಲ್ಲಾ ಕಾರಾಗೃಹ:ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ

ಮಂಗಳೂರು,ಜೂನ್.02:ಮಂಗಳೂರು ನಗರದಲ್ಲಿರುವ ಜಿಲ್ಲಾ ಕಾರಾಗೃಹವನ್ನು ಬಂಟ್ವಾಳ ತಾಲೂಕಿನ ಚೇಳೂರಿಗೆ ಸ್ಥಳಾಂತರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ತಿಳಿಸಿದ್ದಾರೆ.ಅವರಿಂದು ಜಿಲ್ಲಾಧಿಕಾರಿಗಳ ತಮ್ಮ ಕರ್ತವ್ಯಕೊಠಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾರಾಗೃಹಕ್ಕಾಗಿ 59 ಎಕರೆ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. 150 ಎಕರೆ ಜಮೀನಿನ ಅವಶ್ಯಕತೆ ಇದ್ದು ಉಳಿದ ಜಮೀನು ಸ್ವಾಧೀನಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಕಾರಾಗೃಹವನ್ನು ಸ್ಥಳಾಂತರಿಸಿದ ಬಳಿಕ ಪ್ರಸ್ತುತ ಇರುವ ಕಾರಾಗೃಹ ಪ್ರದೇಶವನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಕ್ರಿಯಾಯೋಜನೆ ಸಿದ್ಧಪಡಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಂಗಳಾ ಕಾರ್ನಿಷ್: ನಗರದಲ್ಲಿ ನಿರ್ಮಿಸಲುದ್ದೇಶಿಸಿರುವ ವರ್ತುಲ ರಸ್ತೆ ಮಂಗಳಾ ಕಾರ್ನಿಷ್ ಗೆ ಮುಖ್ಯ ಮಂತ್ರಿಗಳು ರೂ. 100 ಕೋಟಿ ವಿಶೇಷ ಅನುದಾನ ನೀಡಲು ಸಮ್ಮತಿಸಿದ್ದಾರೆ. ಯೋಜನೆಯ ಪ್ರಾಥಮಿಕ ಹಂತದ ಸಮೀಕ್ಷೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಳ್ಳಲಿದ್ದು ಅದಕ್ಕಾಗಿ ಟೆಂಡರ್ ಕರೆದಿದೆ. ಪ್ರಥಮ ಹಂತದ ಸಮೀಕ್ಷೆಗೆ ರೂ. 2 ಕೋಟಿ ವ್ಯಯವಾಗಲಿದ್ದು ಆ ಅನುದಾನದ ಮೊತ್ತವನ್ನು ಮಂಗಳೂರು ಮಹಾನಗರಪಾಲಿಕೆ ಭರಿಸಲು ಸಮ್ಮತಿಸಿದೆ ಎಂದು ಚೆನ್ನಪ್ಪ ಗೌಡ ಅವರು ವಿವರಿಸಿದರು.
ಮುಖ್ಯಮಂತ್ರಿಗಳು ಮಂಗಳೂರು ಮಹಾನಗರಪಾಲಿಕೆಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒದಗಿಸಿದ ನೂರು ಕೋಟಿಗಳ ವಿಶೇಷ ಅನುದಾನದಲ್ಲಿ ರೂ. 90 ಕೋಟಿಯ ಕಾಮಗಾರಿಗಳು ಮುಗಿದಿವೆ. ರೂ. 86 ಕೋಟಿ ಮೊತ್ತವನ್ನು ಕಾಮಗಾರಿ ನಿರ್ವಹಿಸಿದ ಸಂಸ್ಥೆಗಳಿಗೆ ಪಾವತಿಸಲಾಗಿದೆ. ರೂ. 7 ಕೋಟಿ ಮೌಲ್ಯದ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿಯವರು, ಮುಂದಿನ ಹಂತದಲ್ಲಿ ಫುಟ್ ಪಾತ್ ಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಘನತ್ಯಾಜ್ಯ ವಿಲೇವಾರಿ:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕ ಹಂತಕ್ಕೆ ತಲುಪಿದ್ದು ಶೇ. 75ರಷ್ಟು ಅನುದಾನಗೊಂಡಿರುತ್ತದೆ. ಮನೆ ಮನೆ ಘನತ್ಯಾಜ್ಯ ಸಂಗ್ರಹಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. 2011ರ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕ ಮತ್ತು ಆಧುನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಗುರಿ ಹೊಂದಲಾಗಿದೆ.
ಸುವರ್ಣಭೂಮಿ ಯೋಜನೆ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುವರ್ಣ ಭೂಮಿ ಯೋಜನೆಗಾಗಿ 36,000 ಫಲಾನುಭವಿಗಳ ಗುರಿ ಹೊಂದಲಾಗಿದೆ. ಈ ತನಕ 27,821 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅರ್ಹ ಎಲ್ಲ ಅರ್ಜಿಗಳನ್ನು ಸೌಲಭ್ಯ ಒದಗಿಸಲು ಪರಿಗಣಿಸಲಾಗುವುದು.ಜಿಲ್ಲೆ ಯಲ್ಲಿ ಕರೆ ಗಳ ಪುನ ಶ್ಚೇತನ ಕಾಮ ಗಾರಿಗೆ ಚಾಲನೆ ನೀಡ ಲಾಗಿದೆ. ಜಿ.ಪಂ ನಿಂದ 122, ಕಿರು ನೀರಾ ವರಿ ಇಲಾಖೆ ಯಿಂದ 3 ಹಾಗೂ ಮಂಗ ಳೂರು ಮಹಾ ನಗರ ಪಾಲಿಕೆಯ ವತಿಯಿಂದ 10 ಕೆರೆ ಗಳನ್ನು ಪುನ ಶ್ಚೇತ ನಗೊಳಿ ಸಲಾ ಗುವುದು. ಏಳು ಕೆರೆಗಳ ಕಾಮಗಾರಿ ಪ್ರಾರಂಭಗೊಂಡಿದ್ದು ಪ್ರಗತಿಯಲ್ಲಿದೆ ಎಂದು ಡಾ ಚೆನ್ನಪ್ಪಗೌಡ ನುಡಿದರು.
ನೆರೆ ಮತ್ತು ಪ್ರಕೃತಿ ವಿಕೋಪ ತೊಂದರೆಗಳನ್ನು ನಿಭಾಯಿಸುವ ಸಲುವಾಗಿ ಮಹಾನಗರಪಾಲಿಕೆಮಟ್ಟದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಸಮನ್ವಯ ಸಮಿತಿ ಸಭೆ ಶುಕ್ರವಾರ ನಡೆಯಲಿದ್ದು, ಮಳೆಗಾಲ ಹಾಗೂ ಪ್ರಾಕೃತಿಕ ವಿಕೋಪಗಳ ಸಮಸ್ಯೆಗಳ ನಿಭಾಯಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ:ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ಘಟಕವನ್ನು ಸ್ಥಾಪಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸಾರ್ವಜನಿಕ ಸಂಪರ್ಕಾಧಿಕಾರಿಯವರನ್ನು ನೇಮಿಸಲಾಗುವುದು ಎಂದ ಜಿಲ್ಲಾಧಿಕಾರಿ, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳಿಂದ ಸೂಕ್ತ ಪರಿಹಾರ ದೊರಕದ ಸಾರ್ವಜನಿಕರು ಈ ಘಟಕದಲ್ಲಿ ತಮ್ಮ ದೂರು ದುಮ್ಮಾನಗಳನ್ನು ದಾಖಲಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮಂಗಳೂರು ತಾಲೂಕಿಗೆ ತಹಸೀಲ್ದಾರರನ್ನು ನೇಮಕಗೊಳಿಸಲಾಗಿದೆ. ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು.
ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದ್ದು, 208 ಮಂದಿಗೆ ಈಗಾಗಲೇ ರೂ. 50,000ದಂತೆ ಪರಿಹಾರ ಧನ ಪಾವತಿಸಲಾಗಿದೆ. ಅವರಿಗೋಸ್ಕರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೊತೆಗೂಡಿ ಸ್ಥಾಪಿಸಲಾಗುವ ಡೇ ಕೇರ್ ಸೆಂಟರ್ ಗೆ ರೂ. 25,000ಗಳನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ 156 ಎಕರೆ ಜಮೀನು ಸ್ವಾಧೀನಪಡಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮನಾಪ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್, ಗಣಿ ಮತ್ತು ಭೂಗರ್ಭ ಇಲಾಖೆಯ ಡಾ. ರವೀಂದ್ರ ಅವರು ಉಪಸ್ಥಿತರಿದ್ದರು.