Monday, June 6, 2011

ಅನುದಾನ ಸದ್ಬಳಕೆ ಮಾಡಿ: ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು,ಜೂನ್.06: ದ.ಕ.ಜಿಲ್ಲೆಯಲ್ಲಿ ಕಳೆದ ವರ್ಷ ಮಳೆಹಾನಿಗಾಗಿ ಸಂಸದರ ವಿಶೇಷ ಅನುದಾನದಡಿ ಬಿಡುಗಡೆಯಾದ ಒಂದೂವರೆ ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀಡಿದರು.

ಸಂಸದರ ಅಧ್ಯಕ್ಷ ತೆಯಲ್ಲಿ ಇಂದು ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತು ವಾರಿ ಸಮಿತಿ ಸಭೆ ಯಲ್ಲಿ ಈ ವರ್ಷ ಮುಂಗಾರು ಮಳೆಯ ಹಿನ್ನೆಲೆ ಯಲ್ಲಿ ಲೋಕೋ ಪಯೋಗಿ, ಮೆಸ್ಕಾಂ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿ ವೃದ್ಧಿ ಪ್ರಾಧಿ ಕಾರದ ಅಧಿಕಾರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಕೋರಿದರು.ಳೆದ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿ ಎರಡು ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಅನುಷ್ಠಾನದಲ್ಲಿ ಕೊರತೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಮಾಡುವ ಮೊದಲು ತಾವು ಎಲ್ಲ ರಸ್ತೆಗಳನ್ನು ಖುದ್ದು ಪರಿಶೀಲಿಸಿದ್ದು ಸಮಗ್ರ ಮಾಹಿತಿಯೊಂದಿಗೆ ಸಭೆ ನಡೆಸುತ್ತಿರುವುದಾಗಿ ತಿಳಿಸಿದ ಸಂಸದರು, ಪ್ರಗತಿ ಕೆಲಸದಲ್ಲಿ ಅನಗತ್ಯ ವಿಳಂಬ ಮತ್ತು ಸಕಾರಣ ನೀಡದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸು ನೀಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ ಸಂಸದರು, ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಸಮರ್ಪಕ ಮಾಹಿತಿಗಳೊಂದಿಗೆ ಹಾಜರಿರುವಂತೆ ಎಚ್ಚರಿಕೆ ನೀಡಿದರು.ಮೆಸ್ಕಾಂ ವತಿಯಿಂದ ಮಳೆಗಾಲದಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿ ಉಪ ವಿಭಗಾಧಿಕಾರಿ ಮಟ್ಟದಲ್ಲಿ 15 ಜನರ ವಿಶೇಷ ಪಡೆಯನ್ನು ರಚಿಸಲಾಗಿದೆ. ಕಂಬ, ವಯರ್ ಹಾಗೂ ಟ್ರಾನ್ಸ್ ಫಾರ್ಮರ್ ಗಳು ಲಭ್ಯವಿದ್ದು, ಮರಗಳು ಬಿದ್ದ ಸಂದರ್ಭ ಕಡಿಯಲು ಬೇಕಾದ ಸಲಕರಣೆಗಳು ಇಲಾಖೆಯಲ್ಲಿ ಲಭ್ಯವಿದೆ. ಆದರೆ, ಲೈನ್ ಮೆನ್ ಗಳ ಕೊರತೆ ಇದೆ ಎಂದು ಮೆಸ್ಕಾಂ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.ಯಾವುದೇ ರೀತಿಯ ತೊಂದರೆಗಳನ್ನು ಎದುರಿಸುವ ನಿಟ್ಟಿನಲ್ಲಿ ಮೆಸ್ಕಾಂನ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪತ್ರಿಕೆಗಳಿಗೆ ಒದಗಿಸುವಂತೆ ಸಂಸದರು ಸೂಚಿಸಿದರು. ಮೆಸ್ಕಾಂ ಅಧಿಕಾರಿಗಳು ತಕ್ಷಣವೇ ದೂರವಾಣಿ ಸಂಖ್ಯೆಗಳನ್ನು ನೀಡಿದ್ದಾರೆ. ಕೃಷಿ ಇಲಾಖೆಯಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದೆ. ಕೃಷಿ ಇಲಾಖೆಯಲ್ಲಿ ಭತ್ತದ ಬೀಜ ಕೂಡಾ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ. ಈವರೆಗೆ 175 ಕ್ವಿಂಟಾಲ್ ಭತ್ತದ ಬೀಜ ವಿತರಿಸಲಾಗಿದೆ. ಕಳೆದ ವರ್ಷ ಕೃಷಿ ಯಂತ್ರೋಪಕರಣ ಯೋಜನೆಯಡಿ 125 ಪವರ್ ಟಿಲ್ಲರ್ ಗಳನ್ನು ವಿತರಿಸಲಾಗಿದೆ. 700 ಬ್ರಶ್ ಕಟ್ಟರ್ ಗಳನ್ನೂ ಕೃಷಿಕರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಸಿ ಮಡಿ ಮಾಡುವ ಕೆಲಸ ರೈತರಿಂದ ನಡೆಯುತ್ತಿದ್ದು, 15 ದಿನಗಳಲ್ಲಿ ಭತ್ತದ ನಾಟಿ ಕಾರ್ಯ ಆರಂಭಗೊಳ್ಳಲಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.ಕೃಷಿ ಇಲಾಖೆ ನೀಡುವ ಸೌಲಭ್ಯಗಳ ಬಗ್ಗೆ ಪಂಚಾಯಿತಿಗಳ ಮೂಲಕ ಮಾಹಿತಿ ನೀಡಿ, ಅರ್ಹರಿಗೆ ಸೌಲಭ್ಯ ನೀಡಬೇಕೆಂದು ಸಂಸದರು ಸೂಚಿಸಿದರು.
ಸಂಪೂರ್ಣ ಸ್ವಚ್ಛತೆ ಕಾರ್ಯಕ್ರಮದಡಿ ದ.ಕ. ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಜಿಲ್ಲಾ ಪಂಚಾಯತ್ಗೆ ಈ ಸಂಬಂಧ 30 ಲಕ್ಷ ರೂ.ಗಳ ಬಹುಮಾನ ದೊರಕಿದೆ. ಈ ಬಗ್ಗೆ ಜೂ.18ರಂದು ಕಾರ್ಯಕ್ರಮ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ತಿಳಿಸಿದರು.ದ.ಕ. ಜಿಲ್ಲೆಯಲ್ಲಿ ನಿವೇಶನರಹಿತರಿಗಾಗಿ ಒಟ್ಟು 322.86 ಭೂಮಿಯನ್ನು ಮೀಸಲಿಡಬೇಕಾಗಿದೆ. ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ 203 ಗ್ರಾ.ಪಂ.ಗಳಲ್ಲಿ 58 ಗ್ರಾ.ಪಂಗಳಲ್ಲಿ ಸರಕಾರಿ ನಿವೇಶನಗಳನ್ನು ಗುರುತಿಸಲಾಗಿದೆ. ಉಳಿದಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, 15 ದಿನಗಳೊಳಗೆ ವರದಿಯನ್ನು ನೀಡುವುದಾಗಿ ಮಂಗಳೂರು ಉಪವಿಭಗಾಧಿಕಾರಿ ಪ್ರಭುಲಿಂಗ ಕಾವಳಿಕಟ್ಟೆ ಸಭೆಯಲ್ಲಿ ನಿವೇಶನ ರಹಿತರ ಸಮಸ್ಯೆ ಚರ್ಚೆ ವೇಳೆ ವಿವರಿಸಿದರು.
ಸುಳ್ಯದಲ್ಲಿ ಅಡಿಕೆ ಬೆಳೆಯು ಹಳದಿ ರೋಗಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಹಳದಿ ರೋಗ ಪುನಶ್ಚೇತನ ಕಾರ್ಯಕ್ರಮದಡಿ ಹೆಕ್ಟೇರ್ ಗೆ 15,000 ರೂ. ಸಹಾಯಧನವನ್ನು ತೋಟಗಾರಿಕಾ ಇಲಾಖೆಯಿಂದ ನೀಡಲಾಗುವುದು ಎಂದು ತೋಟಗಾರಿಕಾ ಅಧಿಕಾರಿ ಪ್ರವೀಣ್ ತಿಳಿಸಿದರು.
ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಕಳೆದ ವರ್ಷ ಮಕ್ಕಳ ಕೊರತೆಯಿಂದ ಮುಚ್ಚಲಾಗಿದ್ದ ಸುಳ್ಯದ ಜಾಲ್ಸೂರು ತಾಲೂಕಿನ ಕೇಮನಬಳ್ಳಿ ಕಿರಿಯ ಪ್ರಾಥಮಿಕ ಶಾಲೆಯನ್ನು ಈ ವರ್ಷ ಮತ್ತೆ ತೆರೆಯಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ 592 ಅಂಕ ಪಡೆದು ರಾಜ್ಯಕ್ಕೆ ಈ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅನನ್ಯ ಕಲಿತ ಶಾಲೆ ಇದಾಗಿದ್ದು, ಈಗಾಗಲೆ ಸ್ಥಳೀಯ ಒಂಭತ್ತು ಮಂದಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ ಎಂದು ಸುಳ್ಯ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಲ್ಲೇ ಸ್ವಾಮಿ ತಿಳಿಸಿದರು.ವಗಾರ್ವಣೆಯಿಂದಾಗಿ, ಸುಳ್ಯದ ಭೂತಕಲ್ಲು, ಹಾಡಿಕಲ್ಲು, ಬಾನಡ್ಕ ಮತ್ತು ಕಲ್ಸಟ್ಟಬೈಲು ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿದ್ದು, ನಿಯೋಜನೆ ಮೇಲೆ ಇಲ್ಲಿಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಮಲ್ಲೇ ಸ್ವಾಮಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್, ಉಪಾಧ್ಯಕ್ಷರಾದ ಧನಲಕ್ಷಿ ಉಪಸ್ಥಿತರಿದ್ದರು.