Tuesday, June 21, 2011

ಸುಸ್ಥಿರ ಹಾಲು ಉತ್ಪಾದನೆಗೆ ಕರು ಸಾಕಾಣಿಕೆ ಯೋಜನೆ

ಮಂಗಳೂರು,ಜೂನ್.21:ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಸ್ಥಿರ ಕ್ಷೀರಕ್ರಾಂತಿ ಸಾಧಿಸಲು ಹಾಗೂ ಹೈನುಗಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವಿನೂತನ ಕರು ಸಾಕಾಣಿಕೆ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್ ಕಾಕಡೆ ಅವರು ತಿಳಿಸಿದರು.
ಹಾಲು ಉತ್ಪಾ ದಕರ ಸಂಘದ ಹಾಲು ಹಾಕುವ ಸಕ್ರಿಯ ಸದಸ್ಯರ ಮನೆಯಲ್ಲಿ ಕರುಹಾಕಿದ 10 ದಿನಗಳೊಳಗೆ ಹೆಣ್ಣು ಕರುವಿಗೆ ಅದರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಯೋಜನೆಗೆ ನೋಂದಾವಣೆ ಮಾಡಿಕೊಳ್ಳಲಾಗುವುದು. ಒಂದು ಸಾವಿರ ರೂ. ಬೆಲೆಯ ವಿಶೇಷ ಪಶು ಆಹಾರವನ್ನು ನೀಡಲಾಗುವುದು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ 5,000 ಕರುಗಳನ್ನು ಯೋಜನೆಯಡಿ ಸೇರ್ಪಡೆ ಮಾಡಿಕೊಂಡಿದ್ದು, ಪಶುವೈದ್ಯರು ಈ ಕರುಗಳನ್ನು ನಿಯಮಿತವಾಗಿ ಪರಿಶೀಲಿಸಿ 2 ತಿಂಗಳಿಗೊಮ್ಮೆ ಹೆಣ್ಣು ಕರುವನ್ನು ಸಾಕುವ ಬಗ್ಗೆ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡುವರು. ಹೊಟ್ಟೆ ಹುಳದ ಬಾಧೆಗೆ ಮದ್ದು ನೀಡುವುದರಿಂದ ಹಿಡಿದು ವೈಜ್ಞಾನಿಕವಾಗಿ ಕರುಗಳ ಸಾಕಾಣಿಕೆ ಬಗ್ಗೆ ಅರಿವು ಮೂಡಿಸಲಾಗುವುದು.
ಮಹಾ ರಾಷ್ಟ್ರದ ಕೊಲ್ಲಾ ಪುರದ ಗೋಕುಲ್ ಡೈರಿ ಈ ಯೋಜ ನೆಗೆ ಪ್ರೇರಣೆ ಯಾಗಿದ್ದು, ಈ ಯೋಜನೆ ಯಿಂದ ಇಂದು ಕೊಲ್ಲಾ ಪುರ ಹಾಲಿನ ಸ್ಥಿರತೆ ಯನ್ನು ಕಾಯ್ದು ಕೊಂಡಿದೆ. ಅದೇ ಯಶಸ್ವಿ ಮಾದರಿ ಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯಡಿ ಹೆಣ್ಣು ಕರುವಿಗೆ ಟಿಕ್ಕಿ ಹಾಕಿಸಿ ಅದರ ಸಂಪೂರ್ಣ ಪಾಲನೆ ಪೋಷಣೆಯನ್ನು ನೋಡಿಕೊಳ್ಳಲಾಗುವುದು. 18 ರಿಂದ 20 ತಿಂಗಳವರೆಗೆ ಪೋಷಿಸಿ ಅದು ಗರ್ಭ ಧರಿಸುವವರೆಗೆ ನೋಡಿಕೊಳ್ಳಲಾಗುತ್ತದೆ. ಒಕ್ಕೂಟದಿಂದ 2,000 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ಜಿಲ್ಲೆಯಲ್ಲಿ 600 ಜನರನ್ನು ನೋಂದಾಯಿಸಲಾಗಿದೆ. ಪೋಷಕ ಆಹಾರ ವೆಚ್ಚದಲ್ಲಿ ಫಲಾನುಭವಿಗಳಿಂದ ಶೇ.50 ಖರ್ಚು ಭರಿಸಲಾಗುತ್ತದೆ ಎಂದು ಉಪ ವ್ಯವಸ್ಥಾಪಕರಾದ ಡಿ.ಎಸ್. ಹೆಗ್ಡೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರೂ ನಮ್ಮ ಫಲಾನುಭವಿಗಳಲ್ಲಿ ಒಬ್ಬರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್ ಅವರು ಪ್ರತಿಕ್ರಿಯಿಸಿ, ಒಕ್ಕೂಟದ ಈ ಮಾದರಿ ಪ್ರೋತ್ಸಾಹಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ರೈತರೇ ನಮ್ಮ ದೇಶದ ಜೀವಾಳ; ಅವರ ಪರವಾಗಿ ರೂಪಿಸಲ್ಪಡುವ ಎಲ್ಲ ಯೋಜನೆಗಳಿಗೂ ಜಿಲ್ಲಾ ಪಂಚಾಯತ್ ವತಿಯಿಂದ ನೆರವು ಹಾಗೂ ವೈಯಕ್ತಿಕ ಪ್ರೋತ್ಸಾಹ ನೀಡಲಾಗುವುದು ಎಂದರು. ಈ ಯೋಜನೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು ದಕ್ಷಿಣ ಕನ್ನಡ ಒಕ್ಕೂಟ ಹಲವು ವಿನೂತನ ಯೋಜನೆಗಳನ್ನು ಹೈನುಗಾರರಿಗೆ ಒದಗಿಸಿದೆ. ಹೈನುಗಾರಿಕೆ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಂದಿನಿ ಹಮ್ಮಿಕೊಂಡಿದೆ. ಹಸುಗಳ ತಳಿ ಅಭಿವೃದ್ಧಿಯಲ್ಲಿ ಒಕ್ಕೂಟ ಮುಂಚೂಣಿಯಲ್ಲಿದ್ದು 10-11ರಲ್ಲಿ 350 ಕೃತಕ ಗರ್ಭಧಾರಣೆ ಕೇಂದ್ರಗಳಿಂದ ಒಟ್ಟು 1,73,513 ಕೃತಕ ಗರ್ಭಧಾರಣೆ ಆಗಿರುತ್ತದೆ. 2009 ರಲ್ಲಿ ರೂ. 6.21 ಕೋಟಿ ವೆಚ್ಚದಲ್ಲಿ ಮಂಗಳೂರು ಡೈರಿಯ ಸಾಮಥ್ರ್ಯವನ್ನು ಒಂದು ಲಕ್ಷ ಲೀ. 2.5 ಲೀ. ವಿಸ್ತರಿಸಲಾಗಿದೆ. ರೈತರಿಗೆ ಆಧುನಿಕ ಹೈನುಗಾರಿಕೆ ಬಗ್ಗೆ ವಿಚಾರ ಸಂಕಿರಣದ ಮೂಲಕ ಮಾಹಿತಿ, ಲವಣ ಮಿಶ್ರಣ ಹಾಗೂ ಜಂತು ಹುಳದ ಔಷಧ, ಹಾಲು ಕರೆಯುವ ಯಂತ್ರಕ್ಕೆ, ಹುಲ್ಲು ಕೊಚ್ಚುವ ಯಂತ್ರಕ್ಕೆ, ಹಟ್ಟಿ ತೊಳೆಯುವ ಯಂತ್ರಕ್ಕೆ ಅಲ್ಲದೆ ಗೋಬರ್ ಗ್ಯಾಸ್ ಘಟಕ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಹೊಸದಾಗಿ ಮಿನಿ ಡೈರಿ ಯೋಜನೆಯನ್ನು ಅಳವಡಿಸುವವರಿಗೂ ಅನುದಾನ ನೀಡುತ್ತಿದೆ.
ಹೈನುಗಾರಿಕೆಯನ್ನು ಲಾಭದಾಯಕವಾಗಿ ಮಾಡುವ ದೃಷ್ಟಿಯಲ್ಲಿಟ್ಟುಕೊಂಡು ಸಾಂಪ್ರಾದಾಯಿಕ ಹೈನುಗಾರಿಕೆಯಲ್ಲಿ ಪರಿವರ್ತನೆ ತಂದು ನವನವೀನ ವಿಧಿವಿಧಾನಗಳನ್ನು ಆಧುನಿಕ ತಂತ್ರಗಾರಿಕೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಕೊಳ್ಳುವ ಬಗ್ಗೆ ಪ್ರತಿಯೊಂದು ಹಳ್ಳಿಯಲ್ಲೂ ಹಾಲು ಉತ್ಪಾದಕರಿಗೆ ಅರಿವು/ಮಾಹಿತಿ ನೀಡಲು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಕ್ಕೂಟದ ಸದಸ್ಯರು ಸಕ್ರಿಯವಾಗಿದ್ದು, ಪಶುಸಂಗೋಪನೆ ಇಲಾಖೆಯು ಪೂರಕ ನೆರವನ್ನು ಒದಗಿಸುತ್ತಿದೆ ಎಂದರು.