Monday, June 13, 2011

'ಸಮಗ್ರ ಮಾಹಿತಿಯೊಂದಿಗೆ ಕೆಡಿಪಿ ಸಭೆಗೆ ಹಾಜರಾಗಿ'

ಮಂಗಳೂರು,ಜೂನ್.13:ಸಮಗ್ರ ಮಾಹಿತಿಯೊಂದಿಗೆ ಮಾಸಿಕ ಕೆಡಿಪಿ ಸಭೆಗೆ ಜವಾಬ್ದಾರಿಯುತ ಅಧಿಕಾರಿಗಳು ಹಾಜರಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್ ಅವರು ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಏರ್ಪಡಿಸಲಾದ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಳೆಗಾಲದಲ್ಲಿ ಕೃಷಿ,ತೋಟಗಾರಿಕೆ,ಮೆಸ್ಕಾಂ ಇಲಾಖೆಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದರು. ವಿವಿಧ ಇಲಾಖೆಗಳಿಂದ ಇಲಾಖಾಭಿವೃದ್ಧಿಯ ಪ್ರಗತಿಯ ವರದಿಯನ್ನು ಪಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರಲು ಹೇಳಿದರಲ್ಲದೆ, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲು ಸಿಇಒ ಅವರಿಗೆ ಸೂಚಿಸಿದರು.ಅರಣ್ಯ ಇಲಾಖೆ ಪ್ರಸಕ್ತ ಸಾಲಿನಲ್ಲಿ ಅರಣ್ಯ ಮಂತ್ರಿಗಳ ವಿಶೇಷ ಒತ್ತಾಸೆಯ ಮೇರೆಗೆ ಹಲವು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, 14,22,000 ಸಸಿಗಳು ನೆಡಲು ಇಲಾಖೆ ಸಿದ್ಧವಾಗಿದೆ. ಕೃಷಿ ಅರಣ್ಯ, ಶಾಲಾವನ, ಟ್ರೀಪಾರ್ಕ್, ದೈವೀವನ ಸೇರಿದಂತೆ ಹಲವು ಯೋಜನೆಗಳನ್ನು ಅರಣ್ಯ ಇಲಾಖೆ ರೂಪಿಸಿದೆ.35 ರೀತಿಯ ಸ್ಥಳೀಯ ವೈವಿಧ್ಯಗಳ ಸಸಿಗಳು ಬೆಳೆಸಲು ಸಿದ್ಧವಾಗಿದ್ದು, 25 ಶಾಲೆಗಳನ್ನು ಗುರುತಿಸಲಾಗಿದೆ. 8 ವಲಯಾಧಿಕಾರಿಗಳಿಗೆ ಈ ಸಂಬಂಧ ಹೊಣೆಯನ್ನು ವಹಿಸಿದೆ. ಬೆಳ್ತಂಗಡಿಯ ಧರ್ಮಸ್ಥಳ ಬಳಿಯಲ್ಲಿ 100 ಎಕರೆ ಪ್ರದೇಶದಲ್ಲಿ ದೈವೀವನ ರೂಪಿಸಲಾಗಿದೆ. ಕೃಷಿಕರಿಗೆ 2 ವರ್ಷ ಗಿಡಗಳ ನಿರ್ವಹಣೆಗೂ ಅರಣ್ಯ ಇಲಾಖೆ ದುಡ್ಡು ನೀಡಲಿದೆ ಎಂದು ಅರಣ್ಯಾಧಿಕಾರಿಗಳು ವಿವರಿಸಿದರು.
ವಿವಿಧ ಇಲಾಖೆಗಳಲ್ಲಿ ಇದ್ದ ಮಹಿಳೆ ಮತ್ತು ಅಂಗವಿಕಲರಿಗೆ ಮೀಸಲಿಟ್ಟಿರುವ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೂಚಿಸಿದರು. ಮಹಿಳೆಯರಿಗೆ ನೀಡಲಿರುವ ಮೀಸಲು ಅನುಷ್ಠಾನಕ್ಕೆ ಬಂದಿದ್ದು, ಅಂಗವಿಕಲರ ಮೀಸಲು ಅನುಷ್ಠಾನದಲ್ಲಿ ಎಲ್ಲಾ ಇಲಾಖೆಗಳು ವಿಫಲವಾಗಿರುವ ಬಗ್ಗೆ ಪ್ರಭಾರ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿಯವರಾದ ಶಿವರಾಮೇ ಗೌಡ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಸಭೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಇಲಾಖೆಗಳು ಗುರಿ ಮತ್ತು ಸಾಧನೆ ಯನ್ನು ನಿಗಧಿಪಡಿಸಬೇಕೆಂದು ಅವರು ನಿರ್ದೇಶಿಸಿದರು.ಮಳೆಗಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಲು ಈಗಾಗಲೇ ಮೆಸ್ಕಾಂ ಹಲವು ತಂಡಗಳನ್ನು ರಚಿಸಿದೆ. ಆದರೂ ಕೋಣಾಜೆ ಹಾಗೂ ಕೆಲವಡೆಗಳಿಂದ ದೂರುಗಳು ಬರುತ್ತಿದ್ದು ದೂರುಗಳನ್ನು ಪರಿಹರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗದ ಕಾಲೊನಿಗಳಿಗೆ ಹಾಗೂ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಸವಿವರ ಚರ್ಚೆ ನಡೆಯಿತು. ಗ್ರಾಮ ಪಂಚಾಯತಿಗಳು ಬೀದಿ ದೀಪದ ಬಿಲ್ಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿಯೂ ಮೆಸ್ಕಾಂ ಅಧಿಕಾರಿಗಳು ಹೇಳಿದರು. ಚೇಳ್ಯಾರು ಪಂಚಾಯತ್ ಗೆ ಬೀದಿ ದೀಪಕ್ಕೆ ಸಂಪರ್ಕ ನೀಡುವ ಬಗ್ಗೆ, ಉಜಿರೆ ಗ್ರಾಮ ಪಂಚಾಯತ್ ವಿದ್ಯುತ್ ಬಿಲ್ ಪಾವತಿ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೈಕಂಬವನ್ನು ಸಬ್ ಡಿವಿಷನ್ ಆಗಿ ಮೇಲ್ದರ್ಜೆಗೇರಿಸಿದ್ದು ಮುಚ್ಚೂರು, ಎಡಪದವಿಗೆ ಸೆಕ್ಷನ್ ಆಫೀಸ್ ಸ್ಥಾಪಿಸಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಶೀಘ್ರದಲ್ಲಿ, ಈ ಕೊರತೆ ತುಂಬಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು. ಪಿ.ಎಂ.ಜಿ.ಎಸ್.ವೈ ರಸ್ತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಆಶ್ರಯ, ಅಂಬೇಡ್ಕರ್ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆ 230 ಎಕರೆ ಮೀಸಲಿಟ್ಟಿದ್ದು, ಈ ಬಗ್ಗೆ ಪೂರಕ ಮಾಹಿತಿಯನ್ನು ಪಿಡಿಒಗಳು, ತಹಶೀಲ್ದಾರ್ ತರಿಸಿಕೊಂಡು ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ನಿಗಧಿತ ಗುರಿಯನ್ನು ಸಾಧಿಸಿ ಎಂದು ಪ್ರಭಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹೇಳಿದರು.
ಬಿಸಿಎಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆಗಳು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ನಿರ್ಮಾಣ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬುದರ ಬಗ್ಗೆ ಸಭೆಯಲ್ಲಿ ವಿಚಾರಿಸಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು, ನಿರ್ಮಿತಿ ಕೇಂದ್ರ ಇದೇ ಮಾದರಿ ಕರ್ತವ್ಯ ನಿರ್ವಹಿಸಿದರೆ ನೀಡಿದ ದುಡ್ಡನ್ನು ವಾಪಸ್ಸು ಪಡೆದುಕೊಳ್ಳುವ ಪ್ರಸ್ತಾಪವನ್ನು ಸಭೆಯ ಮುಂದಿಡಲಾಗುವುದು ಎಂದರು.ಮುಂದಿನ ಕೆಡಿಪಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ಬಂದ ಅನುದಾನ ಹಾಗೂ ನೇರವಾಗಿ ಸರ್ಕಾರದಿಂದ ಬಂದ ಅನುದಾನ ಹಾಗೂ ನಡೆಸಿದ ಕಾಮಗಾರಿಗಳ ಪ್ರಗತಿ ವರದಿಯನ್ನು ನಿರ್ಮಿತಿ ಕೇಂದ್ರ ನೀಡಬೇಕೆಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹೇಳಿದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು ಜಿಲ್ಲೆಯ ಅಂಗನವಾಡಿಗಳ ಬಗ್ಗೆ ಮಾಹಿತಿ ಪಡೆದರು. ನಬಾರ್ಡ್ ನಿಂದ ಅಂಗನವಾಡಿಗಳಿಗೆ ಬಂದ ಅನುದಾನದಲ್ಲಿ 15 ನಿರ್ಮಿತಿ ಕೇಂದ್ರದವರಿಗೆ ನೀಡಲಾಗಿದೆ. 40 ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಲಾಗಿದೆ. ನಿರ್ಮಿತಿಯವರು ಅಶ್ವಥಪುರ,ಬಡಗ ಎಡಪದವು,ಕಲ್ಲಾಡಿ ಅಂಗನವಾಡಿಗಳ ಕೇಂದ್ರ ಅಭಿವೃದ್ಧಿ ಕಾಮಗಾರಿಗಳ ವರದಿಯನ್ನು ಮುಂದಿನ ಸಭೆಯೊಳಗೆ ತನಗೆ ನೀಡಬೇಕೆಂದು ಹೇಳಿದರು.ಕಳೆದ ಸಾಲಿನಲ್ಲಿ 1ರಿಂದ 7ನೇ ತರಗತಿಯ ವರೆಗೆ 63 ಮಕ್ಕಳು ಶಾಲೆ ಬಿಟ್ಟಿದ್ದು ಈ ಮಕ್ಕಳನ್ನು ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖಾಧಿಕಾರಿಗಳು ಹೇಳಿದರು.
ಪ್ರಸೂತಿ ಆರೈಕೆಗೆ ಫಲಾನುಭವಿಗಳಿಗೆ ಸಕರ್ಾರದಿಂದ ಹಣ ಬಿಡುಗಡೆಯಾಗಿದ್ದು ಮೂರು ದಿನಗಳೊಳಗೆ ತಾಲೂಕುವಾರು ಬಿಡುಗಡೆ ಮಾಡಲಾಗುವುದು ಎಂದರು. ಸುಳ್ಯದ ಮಂಡೆಕೋಲು ಗಡಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವನ್ನು ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ನಳಿನ್ ಕುಮಾರ್ ಮೇನಾಲ ಅವರು ಪ್ರತಿಪಾದಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕ್ರಿಯಾ ಯೋಜನೆಗೆ ಅನುಮೋದನೆ ದೊರಕಿದ್ದು 18 ಕೋಟಿ 62 ಲಕ್ಷ ರೂ ಬಂದಿದೆ. ಈ ಯೋಜನೆಯಡಿ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ ಖರ್ಚು ಮಾಡಿದ ಬಳಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಹೇಳಿದರು.
ತೋಟಗಾರಿಕಾ ಇಲಾಖೆ ಕ್ಷೇತ್ರದಲ್ಲಿ 30,000 ಗೇರು ಗಿಡ,75000 ಕೊಕ್ಕೊ ಗಿಡ,1ಲಕ್ಷ ಕಾಳುಮೆಣಸು ಗಿಡಗಳಿದ್ದು ರೈತರಿಗೆ ವಿತರಣೆ ಮಾಡಲಾಗುವುದು ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ತಿಳಿಸಿದರು. ಇದಲ್ಲದೆ ಉಳ್ಳಾಲದ ಇಲಾಖಾ ಕಚೇರಿಯಲ್ಲಿ ಗೇರು ಸಸಿಗಳು ಲಭ್ಯವೆಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆಯಡಿ ನಿರ್ವಹಣೆಯಲ್ಲಿರುವ ಕಿಂಡಿ ಅಣೆಕಟ್ಟುಗಳ ಹಲಗೆ ಹಾಕುವ ,ತೆಗೆಯುವ ಹಾಸು ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಸಮಿತಿ ರಚಿಸಲಾಗಿದೆ. ಮೆಸ್ಕಾಂ ಜೊತೆ ಐಟಿಡಿಪಿ,ಅಂಬೇಡ್ಕರ್ ಅಭಿವೃದ್ಧಿ ನಿಗಮದವರು ಸಮನ್ವಯ ಸಾಧಿಸಿ ಎಲ್ಲಾ ನೀರಾವರಿ ಯೋಜನೆಗಳು ಜನೋಪಯೋಗಿಯಾಗುವಂತೆ ರೈತರಿಗೆ ಉಪಕಾರವಾಗುವಂತೆ ನೋಡಿಕೊಳ್ಳಬೇಕೆಂದು ಸ್ಥಾಯಿ ಸಮಿತಿ ಸದಸ್ಯರು ಹೇಳಿದರು.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಜೀರ್, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್, ಯೋಜನಾಧಿಕಾರಿ ಸೀತಮ್ಮ ಅವರು ಉಪಸ್ಥಿತರಿದ್ದರು. ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರು.