Friday, March 15, 2013

ಕೆನರಾ ಪ್ರೌಢಶಾಲೆಯಲ್ಲಿ ಮೇಳೈಸಿದ 'ಮೀನಾ'

ಮಂಗಳೂರು, ಮಾರ್ಚ್.15:- ಮೀನಾ ಯಾವುದೇ ಕನಸಿನ ಲೋಕದ ಸುಂದರಿಯಲ್ಲ; ಬಾಲಕಿಯರ ಶಿಕ್ಷಣ ಉತ್ತೇಜಿಸಲು ಕೈಗೊಂಡ ಕಾರ್ಯಕ್ರಮವಿದಾಗಿದ್ದು, ಮೀನಾ ಉಲ್ಲಾಸ ಉತ್ತೇಜನ, ಅನುಕಂಪ ಹಾಗೂ ಸಹಕಾರ ಮನೋಭಾವದ, ಲಿಂಗ ಸಮಾನತೆ, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಇರುವ ಎಲ್ಲ ಬಾಲೆಯರ ಬದುಕಿಗೆ ಮಾದರಿಯಾಗುವ ಎಲ್ಲರ ಬಗೆಗೆ ಕಾಳಜಿ ವಹಿಸುವ ಕ್ರಿಯಾಶೀಲ ಪಾತ್ರ. ಶಿಕ್ಷಣ ವಂಚಿತ ಮೀನಾ ಶಿಕ್ಷಣ ಪಡೆದು ಸಮುದಾಯವನ್ನು ಜಾಗೃತಗೊಳಿಸುತ್ತಾಳೆ. ಶಾಲೆ ಸೇರಿ ವಿದ್ಯೆ ಕಲಿತು ತನ್ನಂತಹ ಹಲವರ ಬಾಳಿಗೆ ಬೆಳಕಾಗುವ ಕಾಲ್ಪನಿಕ ಬಾಲಕಿ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಯುನಿಸೆಫ್ ರೂಪಿಸಿದ ಕಾರ್ಯಕ್ರಮ ಮೀನ. 
ಮೀನ ಕಾರ್ಯಕ್ರಮ ಎಲ್ಲ ಶಾಲೆಗಳಿಗೂ ವಿಸ್ತರಿಸಬೇಕು. ಈ ಕಾರ್ಯಕ್ರಮದ ಪ್ರಯೋಜನ ನಮ್ಮ ಎಲ್ಲಾ ಸಹೋದರಿಯರಿಗೆ ದೊರೆಯಬೇಕು ಎಂದು ಅಡ್ಡೂರು ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿನಿ ಶರೀಫಾ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಅಂಗವಾಗಿ ಮಂಗಳೂರು ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಶುಕ್ರವಾರ ಜರಗಿದ `ಮೀನಾ ಮೇಳ 2012- 13' ದಲ್ಲಿ ಅವರು ಮುಖ್ಯ ಅತಿಥಿಯಾಗಿ ವಿದ್ಯಾರ್ಥಿನಿ ತನ್ನ ಮನದಿಗಿಂತವನ್ನು ಬಿಚ್ಚಿಟ್ಟಳು.
ಹೆಣ್ಣುಮಕ್ಕಳಲ್ಲಿ ರಚನಾತ್ಮಕ ಚಟುವಟಿಕೆಗಳನ್ನು ಪ್ರೇರೇಪಿಸಲು ಉತ್ತೇಜಿಸುವ ಕಾರ್ಯಕ್ರಮವಿದು ಎಂದರು.  30 ಕ್ಲಸ್ಟರ್ ಗಳ 600 ಮಕ್ಕಳು ಭಾಗವಹಿಸಿದ್ದ ಇಂದಿನ ಕಾರ್ಯಕ್ರಮದಲ್ಲಿ ' ಜಾಗೃತ ಕಿಶೋರಿ ಅರಿವಿನ ಕಿನ್ನರಿ' ಎಂಬ ಘೋಷ ವಾಕ್ಯ ಅರ್ಥಪೂರ್ಣವಾಗಿ ಧ್ವನಿಸಿತ್ತು.
ಒಂದು ಕಾಲದಲ್ಲಿ ಗುಜಿರಿ ಹೆಕ್ಕುತ್ತಿದ್ದ ನಾನು ಇಂದು ಕಲಿಕೆಯ ಆನಂದ ಅನುಭವಿಸುತ್ತಿದ್ದೇನೆ ಎಂದು ಇನ್ನೋರ್ವ ಅತಿಥಿ, ಬಿಜೈ ಕಾಪಿಕಾಡು ಚಿಣ್ಣರ ತಂಗುದಾಣದ 5 ನೇ ತರಗತಿ ವಿದ್ಯಾರ್ಥಿನಿ ಮಂಜುಳಾ ಸಂಭ್ರಮ ಹಂಚಿಕೊಂಡರು.
ನಾನು ಮೂಲತಃ ಹಾಸನ ಜಿಲ್ಲೆಯವಳು. ಅಮ್ಮ ಮತ್ತು ತಂಗಿ ಸುಬ್ರಹ್ಮಣ್ಯದಲ್ಲಿದ್ದಾರೆ. ಜೀವನೋಪಾಯಕ್ಕಾಗಿ ಗುಜಿರಿ ಹೆಕ್ಕುತ್ತಿದ್ದ ನಾನು ಸಾಮಾಜಿಕ ಕಾರ್ಯಕರ್ತರು ಹಾಗೂ ಕೆಲ ಶಿಕ್ಷಣ ಪ್ರೇಮಿಗಳ ಪ್ರಯತ್ನದ ಫಲವಾಗಿ ಇಂದು ಶಿಕ್ಷಣ ಪಡೆಯುತ್ತಿದ್ದೇನೆ. ಮೊದಲು ಈ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ ಎನಿಸಿತು. ಈಗ ಧೈರ್ಯ ಬಂದಿದೆ. ಒಳ್ಳೆಯ ಶಿಕ್ಷಣ ಪಡೆದು ಓರ್ವ ಉತ್ತಮ ಶಿಕ್ಷಕಿಯಾಗುವುದಾಗಿ ಕನಸು ಬಿಚ್ಚಿಟ್ಟರು. ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಯ 7 ಮಕ್ಕಳು ಮತ್ತು ಒಬ್ಬರು ಶಿಕ್ಷಕರಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹನಿರ್ದೇಶಕರು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಫಿಲೋಮಿನಾ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್, ಆಸರೆ ಟ್ರಸ್ಟ್ ಅಧ್ಯಕ್ಷೆ ಆಶಾ ಜ್ಯೋತಿ ರೈ, ಗೀತಾ ದೇವದಾಸ್, ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನೀಫ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಯ್ಯ, ಗ್ರೇಸಿ ಗೊನ್ಸಾಲ್ವಿಸ್  ಮುಖ್ಯ ಅತಿಥಿಗಳಾಗಿದ್ದರು.
ಸಭಾ ಕಾರ್ಯಕ್ರಮದ ಮೊದಲು ನಡೆದ ಜಾಗೃತಿ ಜಾಥಾವನ್ನು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್. ವಿಜಯ ಪ್ರಕಾಶ್ ಉದ್ಘಾಟಿಸಿದರು.
ಶಿಕ್ಷಣ ಅಧಿಕಾರಿ ಸದಾನಂದ ಪೂಂಜಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜಲಕ್ಷ್ಮೀ,  ಲೋಕೇಶ್ ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ವೈ ಶಿವರಾಮಯ್ಯ ಪಾಲ್ಗೊಂಡಿದ್ದರು.